ಮಡಿಕೇರಿ, ಸೆ.18: ಆರ್ಥಿಕ ಸಂಕಷ್ಟದ ನಡುವೆಯೂ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 1.26 ಕೋಟಿ ರೂ.ಗಳಷ್ಟು ಲಾಭ ಗಳಿಸಿದೆ, ಆದರೆ ಸಂಘ 14.45 ಕೋಟಿ ರೂ. ನಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಸಂಘದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸಹಕಾರದ ಅಗತ್ಯವಿದೆ ಎಂದು ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ಪ್ರಗತಿ ಬಗ್ಗೆ ಮಾಹಿತಿ ನೀಡಿದರು. ಸಂಘದಲ್ಲಿ ಪ್ರಸಕ್ತ 9132 ಮಂದಿ ಸದಸ್ಯರಿದ್ದು, ಸದಸ್ಯರ ಪಾಲು ಬಂಡವಾಳ 128.20 ಲಕ್ಷಗಳಿದ್ದರೆ, ರಾಜ್ಯ ಸರಕಾರ ಪಾಲು 304.78 ಲಕ್ಷ ಸೇರಿದಂತೆ ಒಟ್ಟು 432.98 ಲಕ್ಷ ರೂ. ಪಾಲು ಬಂಡವಾಳವಿದೆ. ಪ್ರಸಕ್ತ ಸಾಲಿನಲ್ಲಿ ಸಂಘದ ಹುಣಸೂರು ಉದ್ದಿಮೆಯಲ್ಲಿ 320 ಟನ್ ಕಾಫಿ ಸಂಸ್ಕರಣೆ ಮಾಡಿದ್ದು, ಸಂಸ್ಕರಣೆ ಮತ್ತು ಕಾಫಿ ಹೊಟ್ಟು ಮಾರಾಟದಿಂದ 4.20 ಲಕ್ಷ ರೂ. ಗಳಿಸಿದೆ. ಮತ್ತು 6800 ಕೆ.ಜಿ. ಕಾಫಿ ಮಾರಾಟದಿಂದ 2.04 ಲಕ್ಷ ಲಾಭ ಗಳಿಸಿದ್ದು, ಹುಣಸೂರು ಉದ್ದಿಮೆಯ ಎರಡು ಪೆಟ್ರೋಲ್ ಬಂಕ್‍ಗಳಿಂದ ಒಟ್ಟು 81.19 ಲಕ್ಷ ರೂ.ಗಳ ಲಾಭ ಮಾಡಿದೆ ಎಂದು ವಿವರಿಸಿದರು.

ಇದರೊಂದಿಗೆ ಪ್ರಸಕ್ತ ವರ್ಷದಲ್ಲಿ ಮಡಿಕೇರಿ ಮುಖ್ಯ ಕಚೇರಿಯಿಂದ 11.68ಲಕ್ಷ, ಹುಣಸೂರು ಉದ್ದಿಮೆಯಿಂದ 88.37 ಲಕ್ಷ ಹಾಗೂ ಹೆಬ್ಬಾಲೆ ಉದ್ದಿಮೆಯಿಂದ 26.30 ಲಕ್ಷ ರೂ. ಸೇರಿದಂತೆ ಒಟ್ಟು 126.35ಲಕ್ಷ ರೂ.ಗಳ ಲಾಭಗಳಿಸಿದಂತಾಗಿದೆ ಎಂದು ದೇವಯ್ಯ ತಿಳಿಸಿದರು.

ಮಡಿಕೇರಿಯ ಮುಖ್ಯ ಕಚೇರಿ ಕಟ್ಟಡದಿಂದ 15.65 ಲಕ್ಷ, ಹುಣಸೂರು ಉದ್ದಿಮೆಯಿಂದ 42.97 ಲಕ್ಷ ಹಾಗೂ ಹೆಬ್ಬಾಲೆ ಉದ್ದಿಮೆಯಿಂದ 14.39 ಲಕ್ಷ ರೂ. ಸೇರಿದಂತೆ 73.01 ಲಕ್ಷ ರೂ.ಗಳಷ್ಟು ಆದಾಯ ಬಂದಿರುವದಾಗಿ ಹೇಳಿದರು.

ಸಂಘದ ಸದಸ್ಯರಿಗೆ ನೀಡಿರುವ ವಿವಿಧ ಸಾಲಗಳ ಪೈಕಿ 35.43ಲಕ್ಷ ರೂ. ಫಸಲು ಸಾಲ, 0.17 ಲಕ್ಷ ದೀರ್ಘಾವಧಿ ಸಾಲ ಸೇರಿದಂತೆ 35.60 ಲಕ್ಷ ರೂ. ಸಾಲ ಬರಬೇಕಿದ್ದು, ಸಂಘವು ಸರಕಾರಕ್ಕೆ ದೀರ್ಘಾವಧಿ ಸಾಲದ ಬಾಬ್ತು 67.52 ಲಕ್ಷ, ಅದರ ಬಡ್ಡಿ 101.06 ಲಕ್ಷ , ರೆಡಿಮೇಬಲ್ ಪಾಲು ಬಂಡವಾಳವಾಗಿ 200ಲಕ್ಷ ಸೇರಿದಂತೆ 368.58 ಲಕ್ಷ ರೂ.ಗಳ ಸಾಲ ಪಾವತಿಸಲು ಬಾಕಿ ಉಳಿಸಿಕೊಂಡಿದೆ ಎಂದರು.

ಹುಣಸೂರು ಉದ್ದಿಮೆಯ ಯಂತ್ರೋಪಕರಣಗಳು ಹಳೆಯದ್ದಾಗಿದ್ದರಿಂದ ಕಾಫಿ ಸಂಸ್ಕರಣೆಯಲ್ಲಿ ವಿಳಂಬ ವಾಗುತ್ತಿರುವದನ್ನು ಹಾಗೂ ಹೆಚ್ಚಿನ ವೆಚ್ಚ ತಗಲುವದನ್ನು ನಿಯಂತ್ರಿಸಲು ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದ್ದು, ಇದರಿಂದ ಕಾಫಿ ಸಂಸ್ಕರಣಾ ಕಾರ್ಯ ತ್ವರಿತವಾಗಿ ನಡೆಯುವದಲ್ಲದೆ, ಖರ್ಚುವೆಚ್ಚಗಳು ಕಡಿಮೆಯಾಗುತ್ತಿದೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಪಡೆದುಕೊಂಡಿದ್ದ ವ್ಯವಸಾಯೇತರ ಸಾಲ ಮತ್ತು ಫಸಲು ಸಾಲ ಸುಸ್ತಿಯಾಗಿದ್ದು, ಈಪೈಕಿ 31 ಲಕ್ಷ ವ್ಯವಸಾಯೇತರ ಸಾಲವನ್ನು ಏಕಕಾಲಿಕ ತೀರುವಳಿ ಮತ್ತು ಫಸಲು ಸಾಲವನ್ನು 97 ಮಾಸಿಕ ಕಂತುಗಳಲ್ಲಿ ಪಾವತಿಸುವಂತೆ ಬ್ಯಾಂಕ್‍ನ ಆಡಳಿತ ಮಂಡಳಿಯೊಂದಿಗೆ ವ್ಯವಹರಿಸಿದೆ. ಅದರಂತೆ ಬ್ಯಾಂಕ್‍ನ ಆಡಳಿತ ಮಂಡಳಿ ಬಡ್ಡಿ ಪಾವತಿಯಲ್ಲಿ ರಿಯಾಯಿತಿ ನೀಡುವದರೊಂದಿಗೆ ಫಸಲು ಸಾಲವನ್ನು ಮಾಸಿಕ ಕಂತುಗಳಲ್ಲಿ ಪಾವತಿಸಲು ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಕಾಫಿ ಬೆಳೆಗಾರರು ತಾವು ಬೆಳೆದ ಕಾಫಿಯನ್ನು ಸಂಘದ ಉದ್ದಿಮೆಯಲ್ಲಿ ಸಂಸ್ಕರಣೆ ಮಾಡಿಸಲು ಅನುಕೂಲವಾಗುವಂತೆ ಸಂಘದ ವತಿಯಿಂದ ನೂತನವಾಗಿ ಲಾರಿಯೊಂದನ್ನು ಖರೀದಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದ್ದು, ಈ ಮಹಾಸಭೆಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದು ದೇವಯ್ಯ ಹೇಳಿದರು.

ಇಂದು ಮಹಾಸಭೆ

ಸಂಘದ 54ನೇ ವಾರ್ಷಿಕ ಮಹಾಸಭೆ ತಾ.19ರಂದು (ಇಂದು) ಪೂರ್ವಾಹ್ನ 11 ಗಂಟೆಗೆ ಮಡಿಕೇರಿಯ ಕೆಳಗಿನ ಕೊಡವ ಸಮಾಜ ಕಟ್ಟಡದಲ್ಲಿ ನಡೆಯಲಿದ್ದು, ಸಂಘದ ಸದಸ್ಯರಿಗೆ ಮಹಾಸಭೆಯ ಆಹ್ವಾನ ಪತ್ರ ಕಳುಹಿಸಲಾಗಿದೆ. ಆಹ್ವಾನ ಪತ್ರ ತಲುಪದಿದ್ದರೂ ಸದಸ್ಯರು ತಮ್ಮ ಗುರುತಿನ ಚೀಟಿಯೊಂದಿಗೆ ಸಭೆಗೆ ಹಾಜರಾಗಬಹುದು ಎಂದು ದೇವಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರುಗಳಾದ ಹೊಸೂರು ಸತೀಶ್ ಜೋಯಪ್ಪ, ಎನ್.ಕೆ.ಅಯ್ಯಣ್ಣ, ಎಂ.ಎಂ.ಧರ್ಮಾವತಿ, ಉಪ ಕಾರ್ಯದರ್ಶಿ ಎ.ಎಂ.ದೇಚಮ್ಮ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮುಕ್ಕಾಟಿರ ನಾಣಯ್ಯ ಉಪಸ್ಥಿತರಿದ್ದರು.