ವೀರಾಜಪೇಟೆ, ಸೆ. 18: ಕ್ರೀಡೆಯ ಆಯೋಜನೆಯಿಂದ ದೈಹಿಕವಾಗಿ ಆರೋಗ್ಯವನ್ನು ಸಮಸ್ಥಿತಿಯಲ್ಲಿ ಕಾಯ್ದಿರಿಸಿಕೊಳ್ಳಬಹುದು ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಹೇಳಿದರು.

ಕೊಡಗು ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವೀರಾಜಪೇಟೆ ತಾಲೂಕು ಮತ್ತು ಸಂತ ಅನ್ನಮ್ಮ ವಿದ್ಯಾಸಂಸ್ಥೆ, ವೀರಾಜಪೇಟೆ ಇವರುಗಳ ಸಂಯುಕ್ತ ಅಶ್ರಯದಲ್ಲಿ ಸಂತ ಅನ್ನಮ್ಮ ಶಾಲೆಯ ಕ್ರೀಡಾಂಗಣದಲ್ಲಿ 14-17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕೊಡಗು ಜಿಲ್ಲಾ ಮಟ್ಟದ ಕ್ರೀಡಾಕೂಟ ಆರಂಭಗೊಂಡಿತು. 2019-20ನೇ ಸಾಲಿನ ಕ್ರೀಡಾಕೂಟಕ್ಕೆ ಚಾಲನೆ ನೀಡಿ ದೀಪ ಬೆಳಗಿಸಿ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಸ್ಮಿತಾ ಪ್ರಕಾಶ್ ಮಾತನಾಡಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಕ್ರೀಡಾ ಜ್ಯೋತಿಯನ್ನು ಬೆಳಗಿದರು. ಕ್ರೀಡೆಯಲ್ಲಿ ಭಾಗವಹಿಸುವದರಿಂದ ಅರೋಗ್ಯವನ್ನು ಸಮತೋಲ ನದಲ್ಲಿಡಲು ಸಾಧ್ಯ ಎಂದು ಹೇಳಿದರು.

ಕ್ರೀಡಾ ಧ್ವಜ ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಕದನೂರು ಕ್ಷೇತ್ರದ ಮೂಕೊಂಡ ಶಶಿ ಸುಬ್ರಮಣಿ ಅವರು ಕೊಡಗಿನ ದಾನಿಗಳು ಗ್ರಾಮೀಣ ಭಾಗದ ಶಾಲೆಗಳಲ್ಲಿರುವ ಆಟದ ಮೈದಾನಗಳನ್ನು ಗಣನೆಗೆ ತೆಗೆದುಕೊಂಡು ಉನ್ನತೀಕರಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಶಿಕ್ಷಣಾಧಿಕಾರಿ ಗಳಾದ ಮಚ್ಚಾಡೊ ಅವರು ಪ್ರಾಸ್ತಾವಿಕ ನುಡಿಯಲ್ಲಿ ಕೊಡಗು ಜಿಲ್ಲೆಯು ಹಲವು ಕ್ರೀಡಾಪಟುಗಳನ್ನೂ, ಯೋಧರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದರು. ಸಂತ ಅನ್ನಮ್ಮ ಕ್ರೀಡಾಂಗಣಕ್ಕೆ ಉದಾರವಾಗಿ ರೂ.22.5 ಲಕ್ಷಗಳನ್ನು ನೀಡಿದ ಉದ್ಯಮಿ ಸಿ.ಪಿ. ಪ್ರಕಾಶ್ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ, ತಾಲೂಕು ಪಂಚಾಯಿತಿ ಸದಸ್ಯರಾದ ಬಿ.ಎಂ ಗಣೇಶ್, ಸೀತಮ್ಮ, ವೀರಾಜಪೇಟೆ ಕ್ಷೇತ್ರ ಶೀಕ್ಷಣಾಧಿಕಾರಿ ಶ್ರೀಶೈಲ ಬೆಳಗಿ, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಎನ್. ಗಾಯತ್ರಿ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್. ನಾಗಾರಾಜಯ್ಯ, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಅಗಸ್ಟಿನ್ ಬೆನ್ನಿ ಮತ್ತು ಫಾಸಿಹಾ ತಬಸ್ಸುಂ ಅವರುಗಳು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ಸಂಚಾಲಕ ಮತ್ತು ಪ್ರಮುಖ ಗುರುಗಳಾದ ರೆ.ಫಾ ಮೊದಲೈ ಮುತ್ತು, ಸಹಾಯಕ ಗುರುಗಳಾದ ರೆ.ಫಾ. ರೊನಿ ಕುಮಾರ್ ಮತ್ತು ರ.ಫಾ. ರೋಷನ್ ಬಾಬು ಕ್ರೀಡಾಪಟುಗಳ ಪಥಸಂಚಲದ ವಂದನೆ ಸ್ವೀಕರಿಸಿದರು. ಆಕರ್ಷಕ ಪಥಸಂಚಲನದಲ್ಲಿ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳ ಕ್ರೀಡಾಪಟುಗಳು, ಸಂತ ಅನ್ನಮ್ಮ ಶಾಲೆಯ ಎನ್.ಸಿ.ಸಿ., ಸ್ಕೌಟ್ ಮತ್ತು ಗೈಡ್ಸ್ ಹಾಗೂ ವಾದ್ಯ ವೃಂದ ಭಾಗವಹಿಸಿದವು. ಶಾಲಾ ವಿದ್ಯಾರ್ಥಿ ಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾಕೂಟವು ತಾ. 20 ರಂದು ಸಮಾಪ್ತಿಗೊಳ್ಳಲಿದೆ.

- ಕೆ.ಕೆ.ಎಸ್. ವೀರಾಜಪೇಟೆ