ಸೋಮವಾರಪೇಟೆ, ಸೆ. 18: ಸಾರಿಗೆ ಇಲಾಖೆಯು ನೂತನವಾಗಿ ಜಾರಿಗೆ ತಂದಿರುವ ದಂಡ ನಿಯಮದಿಂದಾಗಿ ವಾಹನ ಮಾಲೀಕರು ಮತ್ತು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ನಿಯಮವನ್ನು ಪರಿಷ್ಕರಿಸಿ ದಂಡ ಮೊತ್ತವನ್ನು ಕಡಿತಗೊಳಿಸಲು ಕ್ರಮವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಇಂದಿರಾಗಾಂಧಿ ಅಭಿಮಾನಿಗಳ ಸಂಘ ಆಗ್ರಹಿಸಿದೆ.

ಈ ಬಗ್ಗೆ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದರು.

ಜನರಲ್ಲಿ ಜಾಗೃತಿ ಮೂಡಿಸದೆ ಏಕಾಏಕಿ ದಂಡ ವಸೂಲಿ ಮಾಡುತ್ತಿರುವದು ಸರಿಯಲ್ಲ ಎಂದು ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಹೇಳಿದರು. ನಾಲ್ಕು ರಾಜ್ಯಗಳಲ್ಲಿ ದಂಡದ ಮೊತ್ತವನ್ನು ಸಡಿಲಿಕೆ ಮಾಡಿದ್ದಾರೆ. ಪಶ್ಚಿಮಬಂಗಾಳದ ಮುಖ್ಯಮಂತ್ರಿ ದುಪ್ಪಟ್ಟು ದಂಡ ವಸೂಲಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರವೂ ದಂಡ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಮಾಸಿಕ 5 ರಿಂದ 6 ಸಾವಿರ ಸಂಬಳಕ್ಕೆ ದುಡಿಯುವ ಅನೇಕರಿದ್ದಾರೆ. ಆಕಸ್ಮಿಕ ಆದ ಘಟನೆಗೆ ದಂಡ ಕಟ್ಟುವ ಸಂದರ್ಭ ಬಂದರೆ, ಕುಟುಂಬ ನಿರ್ವಹಣೆಗೆ ಭಿಕ್ಷೆ ಬೇಡುವಂತ ಪರಿಸ್ಥಿತಿ ಎದುರಾಗಬಹುದು ಎಂದು ಇಂದಿರಾಗಾಂಧಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ಹೇಳಿದರು.

ಮನವಿ ಸಲ್ಲಿಸುವ ಸಂದರ್ಭ ಕರವೇ ನಗರಾಧ್ಯಕ್ಷ ಮಂಜುನಾಥ್, ಪದಾಧಿಕಾರಿಗಳಾದ ಹಸನಬ್ಬ, ಹೆಚ್.ಡಿ. ಸಂತೋಷ್, ಮೊಗೇರ ಸಂಘದ ಅಧ್ಯಕ್ಷ ಬಿ.ಎಂ. ದಾಮೋದರ್, ಪದಾಧಿಕಾರಿಗಳಾದ ಹೆಚ್.ಒ. ಪ್ರಕಾಶ್, ಹೆಚ್.ಬಿ. ರಾಜಪ್ಪ ಮತ್ತಿತರರು ಇದ್ದರು.