ಮಡಿಕೇರಿ, ಸೆ.18: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನೀರು ಮತ್ತು ನೈರ್ಮಲ್ಯ ಕುರಿತ ಸಂಚಾರಿ ವಾಹನದ ಮೂಲಕ ಜಾಗೃತಿ ಕಲಾಜಾಥಾ ಕಾರ್ಯಕ್ರಮಕ್ಕೆ ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಚಾಲನೆ ನೀಡಿದರು.

ನೀರು ಮತ್ತು ನೈರ್ಮಲ್ಯ ಕುರಿತು ಜಿಲ್ಲೆಯ 25 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ಕಲಾಜಾಥಾ ಏರ್ಪಡಿಸಲಾಗಿದ್ದು, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ಸಂರಕ್ಷಣೆ ಕುರಿತು ಬೀದಿ ನಾಟಕ ಹಾಗೂ ಸಾಕ್ಷ್ಯ ಚಿತ್ರಗಳ ಮೂಲಕ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಕೊಡಗು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಿಸಲ್ಪಟ್ಟಿದ್ದು, ಮುಂದಿನ ಹಂತದಲ್ಲಿ ಘನ, ದ್ರವ ತ್ಯಾಜ್ಯ ನಿರ್ವಹಣೆ ಮತ್ತು ನೀರಿನ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ಹೇಳಿದರು.

ಹಸಿಕಸ ಮತ್ತು ಒಣಕಸ ಬೇರ್ಪಡಿಸಿ ಕಾಂಪೋಸ್ಟೀಕರಣ ಮಾಡಬೇಕಿದೆ. ಒಣ ಕಸವನ್ನು ಸಂಗ್ರಹಿಸಿ ಮರು ಬಳಕೆ ಮಾಡಬಹುದಾಗಿದೆ ಎಂದರು.

ಸ್ವಚ್ಛ ಭಾರತ ಮಿಷನ್ ಅಭಿಯಾನದ ಸಮಾಲೋಚಕ ಪೆಮ್ಮಯ್ಯ ಮಾತನಾಡಿ ಗೋಡೆ ಬರಹ ಬರೆಸುವದು, ಸ್ವಚ್ಛತಾ ಕಾರ್ಯಕ್ರಮ, ಸ್ವಚ್ಛಮೇವ ಜಯತೆ, ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ, ಶಾಲೆಗಳಲ್ಲಿ ಮಕ್ಕಳಿಗೆ ಸ್ವಚ್ಛತಾ ಅಭಿಯಾನ ಬಗ್ಗೆ ಕಾರ್ಯಕ್ರಮ, ಘನ, ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಸಂಗ್ರಹಣೆ, ಮತ್ತಿತರ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಸ್ವಚ್ಛ ಭಾರತ್ ಮಿಷನ್ ಸಮಾಲೋಚಕರಾದ ವಾಸುದೇವ್, ಕಲಾವಿದ ಈ ರಾಜು ಮತ್ತು ತಂಡದವರು ಇದ್ದರು.

ಕಾರ್ಯಕ್ರಮದ ವಿವರ: ತಾ.19 ರಂದು ನಾಪೋಕ್ಲು, ಕಾರ್ಮಾಡು, ತಾ.20 ರಂದು ಪಾಲಿಬೆಟ್ಟ, ಚೆನ್ನಯ್ಯನಕೋಟೆ, ತಾ.21 ರಂದು ಗೋಣಿಕೊಪ್ಪ, ತಿತಿಮತಿ, 22 ರಂದು ಅರ್ವತೊಕ್ಲು, ಪೊನ್ನಂಪೇಟೆ, 23 ರಂದು ಶ್ರೀಮಂಗಲ, ಕುಟ್ಟ, 24 ರಂದು ಪೊನ್ನಂಪೇಟೆ, ಬಾಳೆಲೆ, 25 ರಂದು ನಂಜರಾಯಪಟ್ಟಣ, ಮುಳ್ಳುಸೋಗೆ, 26 ರಂದು ಕೂಡಿಗೆ, ಗೌಡಳ್ಳಿ, 27 ರಂದು ಚೌಡ್ಲು ,ಬೆಟ್ಟದಳ್ಳಿ, 28 ರಂದು ದುಂಡಳ್ಳಿ, ಶನಿವಾರಸಂತೆ, 29 ರಂದು ಕೊಡ್ಲಿಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ.