ಕುಶಾಲನಗರ, ಸೆ. 18: ಕುಶಾಲನಗರ ಕೈಗಾರಿಕಾ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರಕಾರ 9.5 ಕೋಟಿ ರೂ.ಗಳ ಅನುದಾನ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಅವರು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಕುಶಾಲನಗರ ಕೈಗಾರಿಕಾ ಬಡಾವಣೆ ಪ್ರದೇಶ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಲಹೆ ಸೂಚನೆ ಪಡೆದ ಜಿಲ್ಲಾಧಿಕಾರಿಗಳು ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಪ್ರಮುಖವಾಗಿ ಕೆಲವು ಸಮಸ್ಯೆಗಳು ತಲೆದೋರಿದ್ದು ಉದ್ಯಮಿಗಳಿಗೆ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಭೂಮಿಯ ದಾಖಲೆ ದೊರಕದೆ ಲಭ್ಯವಾಗದೆ ಸಮಸ್ಯೆಗಳು ಸೃಷ್ಠಿಯಾಗಿವೆ ಎನ್ನುವ ದೂರಿನ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಲು ಕ್ರಮಕೈಗೊಳ್ಳಲಾಗುವದು. ಕೈಗಾರಿಕಾ ಬಡಾವಣೆಯಲ್ಲಿರುವ ಉದ್ಯಮಿಗಳಿಂದ ತೆರಿಗೆ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಮತ್ತು ಕೈಗಾರಿಕಾ ಅಭಿವೃದ್ಧಿ ಮಂಡಳಿ ನಡುವೆ ಗೊಂದಲ ಮೂಡಿದ್ದು ಇದಕ್ಕೆ 2017-18 ನಂತರದ ಆದೇಶದಂತೆ ಪ್ರಸಕ್ತ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಜಿಲ್ಲಾಧಿಕಾರಿಗಳು, ಕೈಗಾರಿಕಾ ಬಡಾವಣೆಯ ಉದ್ಯಮಿಗಳು ಈ ಹಿಂದೆ ಉಳಿಸಿಕೊಂಡ ಬಾಕಿ ತೆರಿಗೆಯನ್ನು ಆದಷ್ಟು ಬೇಗನೆ ಸಂದಾಯ ಮಾಡಬೇಕು ಎಂದರಲ್ಲದೆ ತೆರಿಗೆಯನ್ನು ಪಂಚಾಯ್ತಿ ಮೂಲಕ ಸಂದಾಯ ಮಾಡಬೇಕಾಗಿದೆ ಎಂದರು.

ಬಡಾವಣೆಯ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯ್ತಿ ಮತ್ತು ಕೈಗಾರಿಕಾ ಅಭಿವೃದ್ಧಿ ಮಂಡಳಿ ಜಂಟಿಯಾಗಿ ಕ್ರಿಯಾಯೋಜನೆ ರೂಪಿಸಬೇಕು. ಬಡಾವಣೆಯಲ್ಲಿ ರಸ್ತೆ ನಿರ್ಮಾಣ, ಸ್ವಚ್ಛತೆಗೆ ಆದ್ಯತೆ, ಚರಂಡಿ ಕಾಮಗಾರಿ ಯೋಜನೆ ಕೈಗೆತ್ತಿಕೊಂಡು ಈ ಬಗ್ಗೆ ಉದ್ಯಮಿಗಳ ಸಂಘದ ಪದಾಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು ಎಂದು ಸೂಚಿಸಲಾಯಿತು.

ಈಗಾಗಲೆ ಸರಕಾರ 9.5 ಕೋಟಿ ರೂ.ಗಳ ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮೂಲಕ ಉನ್ನತ ದರ್ಜೆಯ ರಸ್ತೆ ನಿರ್ಮಾಣ ಕಾಮಗಾರಿ ಮುಂದಿನ ಎರಡು ತಿಂಗಳ ಒಳಗಾಗಿ ಪ್ರಾರಂಭಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ಕುಶಾಲನಗರ ಕೈಗಾರಿಕಾ ಬಡಾವಣೆಯ ಎಸ್‍ಎಲ್‍ಎನ್ ಕಾಫಿ ಸಂಸ್ಕರಣಾ ಘಟಕ ಆವರಣದಲ್ಲಿ ನಡೆದ ಸಭೆಯಲ್ಲಿ ಕೈಗಾರಿಕೋದ್ಯಮಿಗಳ ಸಂಘದ ಪ್ರಮುಖರಾದ ಜಗದೀಶ್, ವಿ.ಎಲ್.ಹರೀಶ್, ಶಬ್ಬೀರ್ ಪಾಷ, ಎಸ್‍ಎಲ್‍ಎನ್ ವಿಶ್ವನಾಥನ್, ಸಾತಪ್ಪನ್, ಶಿವಪ್ರಕಾಶ್ ಮತ್ತಿತರರು ಬಡಾವಣೆಯಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಈ ನಡುವೆ ಬಡಾವಣೆಯಲ್ಲಿ ಸ್ಮಶಾನ ಸಮಸ್ಯೆ ಬಗ್ಗೆ ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಸಮಜಾಯಿಷಿಕೆ ಪಡೆದು ಸಮಸ್ಯೆಯ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.

ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಕಾವೇರಿ ನೀರಾವರಿ ನಿಗಮ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಅವರು ಕುಶಾಲನಗರದಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದು, ಗುಡ್ಡೆಹೊಸೂರು ವ್ಯಾಪ್ತಿಯಿಂದ ಕೂಡಿಗೆ ತನಕ ಇತ್ತೀಚಿನ ವರ್ಷಗಳಲ್ಲಿ ಭಾರೀ ಪ್ರವಾಹ ಉಂಟಾಗುತ್ತಿದ್ದು ಇದರಿಂದ ಸಾವಿರಾರು ಮನೆಗಳು ಜಲಾವೃತಗೊಳ್ಳುತ್ತಿರುವ ವ್ಯಾಪ್ತಿಯ ಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ ಯೋಜನೆ ರೂಪಿಸಲಾಗುವದು. ಪ್ರವಾಹ ಕಂಡುಬರುವ ಪ್ರದೇಶಗಳ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವದು ಎಂದರು. ನದಿ ತಟಗಳಿಂದ 100 ಮೀ ಅಂತರದಲ್ಲಿರುವ ಕಟ್ಟಡಗಳ ತೆರವುಗೊಳಿಸುವ ಕಾರ್ಯ, ನದಿ ಗಡಿ ಗುರುತು ಮಾಡುವದರೊಂದಿಗೆ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.

ಎಡಿಎಲ್‍ಆರ್ ಶಂಷುದ್ದೀನ್, ಕೈಗಾರಿಕಾ ಅಭಿವೃದ್ಧಿ ಮಂಡಳಿಯ ಅಧಿಕಾರಿ ಶ್ರೀಧರ್, ಕಂದಾಯ ಅಧಿಕಾರಿಗಳು, ಜಿಪಂ ಸದಸ್ಯೆ ಮಂಜುಳಾ, ತಾಪಂ ಸದಸ್ಯ ಗಣೇಶ್, ತಾಲೂಕು ಇಒ ಸುನಿಲ್, ಪಿಡಿಓ ಆಯೇಷ, ಘಟಕಗಳ ಮಾಲೀಕರು, ಉದ್ಯಮಿಗಳು ಇದ್ದರು.