ಸೋಮವಾರಪೇಟೆ: ನಿರಂತರ ಅಭ್ಯಾಸದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಡಿ. ದಿವಾಕರ್ ಹೇಳಿದರು.

ಇಲ್ಲಿಗೆ ಸಮೀಪದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗೌಡಳ್ಳಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ತೋರ್ಪಡಿಸಿ ಜೀವನದಲ್ಲಿ ಯಶಸ್ಸು ಗಳಿಸಬೇಕು. ಶಿಕ್ಷಕರು ಹಾಗೂ ಪೋಷಕರ ಮಾರ್ಗದರ್ಶನವನ್ನು ಸದ್ಭಳಕೆ ಮಾಡಿಕೊಂಡು ಸಾಧನೆ ಹಾದಿಯಲ್ಲಿ ಮುನ್ನುಗ್ಗಬೇಕು ಎಂದರು.

ವೇದಿಕೆಯಲ್ಲಿ ಮುಖ್ಯ ಶಿಕ್ಷಕ ರೇಣುಕಾ ಸ್ವಾಮಿ, ಸಿ.ಆರ್.ಪಿ. ಸತೀಶ್, ಗ್ರಾ.ಪಂ. ಉಪಾಧ್ಯಕ್ಷೆ ಈಶ್ವರಿ, ಶ್ರೀರಾಮ ಸೇವಾ ಸಂಘದ ಪದಾಧಿಕಾರಿ ನಾರಾಯಣ ಇದ್ದರು.

ವಿದ್ಯಾರ್ಥಿಗಳಿಗೆ ಕಂಠಪಾಠ, ಅಭಿನಯ ಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ, ಚಿತ್ರಕಲೆ, ರಸಪ್ರಶ್ನೆ, ಜಾನಪದ ನೃತ್ಯ, ಕೋಲಾಟ ಮತ್ತಿತರ ಸ್ಪರ್ಧೆಗಳು ನಡೆದವು. ಶಿಕ್ಷಕಿಯರಾದ ಅಬೀದಾಬಾನು, ದಾಕ್ಷಾಯಣಿ ಕಾರ್ಯಕ್ರಮ ನಿರ್ವಹಿಸಿದರು.

ಶನಿವಾರಸಂತೆ: ಒಂದಕ್ಷರ ಕಲಿಸಿದಾತನೂ ಗುರುವೇ ಎಂಬ ಮನೋಭಾವನೆಯಿಂದ ಅವರ ಮಾರ್ಗದರ್ಶನದಲ್ಲಿ ನಡೆದಾಗ ವಿದ್ಯಾರ್ಥಿ ಗುರಿ ತಲಪಲು ಸಾಧ್ಯ ಎಂದು ಸುಪ್ರಜಾ ಗುರುಕುಲ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಿ. ಸುಜಲಾದೇವಿ ಅಭಿಪ್ರಾಯಪಟ್ಟರು.

ಪಟ್ಟಣದ ಸುಪ್ರಜಾ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯೆಗೆ ವಿನಯವೇ ಭೂಷಣ ಎಂಬಂತೆ ಗುರುವಿಗೆ ವಿಧೇಯನಾಗಿ ಮಾರ್ಗದರ್ಶನದಲ್ಲಿ ನಡೆದಾಗ ವಿದ್ಯಾರ್ಥಿ ಜೀವನದಲ್ಲಿ ಮನುಷ್ಯನಾಗಿ ನೆಲೆನಿಂತು ಸಾಫಲ್ಯತೆ ಪಡೆಯಬಹುದು ಎಂದರು. ಶಿಕ್ಷಕರಿಗೆ ಕ್ರೀಡಾ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್ ಮಾತನಾಡಿ, ಗುರು ಪರಂಪರೆ ಕಾಲದಿಂದ ಕಾಲಕ್ಕೆ ಬದಲಾಗುತ್ತಿದೆ. ಶಿಕ್ಷಕರ ದಿನಾಚರಣೆ ಆಚರಿಸಿದರೇ ಸಾಲದು ಅವರು ದ್ಯೇಯೋದ್ದೇಶ, ಆದರ್ಶಗಳನ್ನು ಪಾಲಿಸಿದರೆ ವಿದ್ಯಾರ್ಥಿ ಜೀವನ ಸಾರ್ಥಕವಾಗುತ್ತದೆ ಎಂದರು.

ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಅಶ್ವಥ್ ಕಾರ್ಯಕ್ರಮ ನಿರೂಪಿಸಿದರು.

ಕೂಡಿಗೆ: ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಹಾಕಿ ಕ್ರೀಡಾಕೂಟ ಇಲ್ಲಿನ ಕ್ರೀಡಾಶಾಲೆ ಹಾಕಿ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟದ ಆಯೋಜನೆಯನ್ನು ಕೂಡಿಗೆ ಪದವಿಪೂರ್ವ ಕಾಲೇಜು ಮಾಡಿತ್ತು. ಕ್ರೀಡಾಕೂಟದ ಉದ್ಘಾಟನೆಯನ್ನು ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ನೆರವೇರಿಸಿ ನಂತರ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗುವ ಮೂಲಕ ಶಿಸ್ತು, ಸಂಯಮ, ಸನ್ನಡತೆ ಹಾಗೂ ತಾಳ್ಮೆ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಮಹೇಶ್, ಕಾಲೇಜು ಉಪನ್ಯಾಸಕರಾದ ನಾಗಪ್ಪ, ರಮೇಶ, ಸತೀಶ್, ಹನುಮರಾಜ್, ಪಲ್ಲವಿ, ಪವನ, ಸುನಿತಂಗಚನ್, ಲಿಲೇಟ್ ಹಾಗೂ ಕ್ರೀಡಾ ಶಾಲೆಯ ಹಾಕಿ ತರಬೇತುದಾರ ಅಂತೋಣಿ ಡಿಸೋಜ, ವೆಂಕಟೇಶ್ ಹಾಜರಿದ್ದರು. ತಾಲೂಕಿನ ಪದವಿಪೂರ್ವ ಕಾಲೇಜಿನ ಹಾಕಿ ತಂಡಗಳು ಭಾಗವಹಿಸಿದ್ದವು.

ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಹಿಂದಿ ದಿವಸ್‍ಅನ್ನು ಕಾಲೇಜಿನ ಕೌಸ್ತುಭ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿ ಇನ್ನರ್ ವೀಲ್ ಕ್ಲಬ್‍ನ ಅಧ್ಯಕ್ಷೆ ನಿಶಾ ಮೋಹನ್ ಆಗಮಿಸಿದ್ದರು.

1949 ರಲ್ಲಿ ಭಾರತದ ಸಂವಿಧಾನ ಈ ದಿನವನ್ನು ಹಿಂದಿ ದಿವಸ್ ಎಂದು ಆಚರಿಸಬೇಕೆಂದು ತೀರ್ಮಾನಿಸಲಾಯಿತು. ವಿಶ್ವದಾದ್ಯಂತ ಇಂಗ್ಲೀಷ್, ಚೀನಿ ಭಾಷೆಯೊಂದಿಗೆ ಹಿಂದಿ ಭಾಷೆಯು ವಿಶ್ವದಾದ್ಯಂತ ವಿಸ್ತರಿಸಿದೆ. ಇದು ವಿಶ್ವದ ಅತ್ಯಂತ ಪುರಾತನ ಹಾಗೂ ವಿಶಾಲವಾದ ಭಾಷೆಯಾಗಿದೆ ಎಂದರು.

ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಮಾತನಾಡಿ, ಹಿಂದಿ ಭಾಷೆ ನಮ್ಮ ರಾಷ್ಟ್ರ ಭಾಷೆಯಾಗಿದೆ. ಹಿಂದಿ ಭಾಷೆ ಕೇವಲ ಭಾಷೆಯಲ್ಲ ಇದು ಜನರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ. ಉತ್ತರ ಭಾರತದಲ್ಲಿ ಹಿಂದಿ ಭಾಷೆಯನ್ನು ಬೆಳೆಸಬೇಕಾದರೆ ಪ್ರತಿನಿತ್ಯ ಬಳಸುವಂತಾಗಬೇಕು. ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಹಿಂದಿ ಭಾಷೆಯು ಅತ್ಯಂತ ಅವಶ್ಯಕವಾಗಿದೆ ಎಂದರು.

ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್. ಎಂ. ನಾಣಯ್ಯ, ಹಿಂದಿ ವಿಭಾಗದ ಉಪನ್ಯಾಸಕರಾದ ಧನ್ಯ ಹಾಗೂ ಬೋಜಮ್ಮ ಮತ್ತು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಂ.ಎಂ. ದೇಚಮ್ಮ ಉಪಸ್ಥಿತರಿದ್ದರು.ಒಡೆಯನಪುರ: ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ವಿವಿಧ ವೇಷಭೂಷಣಗಳ ಸ್ಪರ್ಧೆ, ನೃತ್ಯ ಮುಂತಾದ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ. ಸುಜಲಾದೇವಿ, ಕಾರ್ಯದರ್ಶಿ ಗುರುಪ್ರಸಾದ್ ಮುಂತಾದವರು ಹಾಜರಿದ್ದರು.

ವೀರಾಜಪೇಟೆ: ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ನೇಚರ್ ಕ್ಲಬ್ ಹಾಗೂ ಮುಳಿಯ ಜ್ಯುವೆಲ್ಸ್ ಗ್ರೂಪ್ಸ್‍ನ ಸಹಯೋಗದೊಂದಿಗೆ ಸೀಡ್‍ಬಾಲ್ ತಯಾರಿ ಕಾರ್ಯಾಗಾರ ನಡೆಯಿತು.

240 ಸ್ವಯಂಸೇವಾ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಾಗಾರದಲ್ಲಿ ಎರಡು ಸಾವಿರದ ಐನೂರಕ್ಕೂ ಹೆಚ್ಚು ಸೀಡ್ಸ್ ಬಾಲ್‍ಗಳನ್ನು ತಯಾರಿಸಲಾಯಿತು. ಕಾರ್ಯಾಗಾರದ ಉದ್ಘಾಟನೆಯನ್ನು ಸೈಂಟ್ ಆನ್ಸ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ನೆರವೇರಿಸಿದರು. ನಂತರ ಅವರು ನಿಸರ್ಗದ ಮಹತ್ವ ಹಾಗೂ ಪರಿಸರವನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ಮಹತ್ವದ ಬಗ್ಗೆ ತಿಳಿಸಿ ಮುಂದಿನ ಹಂತದ ಯೋಜನೆಗೆ ಶುಭಕೋರಿದರು.

ಕಾರ್ಯಕ್ರಮದಲ್ಲಿ ಪ್ರಾಯೋಜಕತ್ವ ವಹಿಸಿದ್ದ ಮುಳಿಯ ಜ್ಯುವೆಲ್ಸ್ ಗ್ರೂಪ್‍ನ ಅಧಿಕಾರಿಗಳು ಭಾಗವಹಿಸಿದ್ದರು. ಕೊಡಗು ಮುಳಿಯ ಜ್ಯುವೆಲ್ಸ್ ಗ್ರೂಪ್‍ನ ಸೀಡ್ಸ್ ಬಾಲ್ ಘಟಕದ ವಿಭಾಗದ ವ್ಯವಸ್ಥಾಪಕ ಜಯಪ್ರಕಾಶ್ ಬೀಜದುಂಡೆ ತಯಾರಿಸುವ ವಿಧಾನ ಹಾಗೂ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಗೋಣಿಕೊಪ್ಪ ಮುಳಿಯ ಜ್ಯವೆಲ್ಸ್‍ನ ವ್ಯವಸ್ಥಾಪಕ ಜಯಪ್ರಕಾಶ್ ಎನ್. ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಸೀಡ್ ಬಾಲ್ ತಯಾರಿಕೆಗೆ ಚಾಲನೆ ನೀಡಿದರು.

ಮುಳಿಯ ಗ್ರೂಪ್ಸ್‍ನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಅರ್ಜುನ್ ಹೆಚ್.ಆರ್., ನೇಚರ್ ಕ್ಲಬ್‍ನ ಅಧಿಕಾರಿ ಅಜಯ್ ಮ್ಯಾಥ್ಯು, ಯೂತ್ ರೆಡ್ ಕ್ರಾಸ್ ಅಧಿಕಾರಿ ಸಂಕೇತ್ ಪಿ. ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರುಗಳು ಭಾಗವಹಿಸಿದ್ದರು.

ಸ್ವಯಂಸೇವಾ ವಿದ್ಯಾರ್ಥಿನಿ ದೇವಿಕಾ ನಿರೂಪಣೆ, ವಿದ್ಯಾರ್ಥಿ ಅಮಿತ್ ಸ್ವಾಗತ, ವಿದ್ಯಾರ್ಥಿ ಅಕ್ಷರ ವಂದನಾರ್ಪಣೆ ನೆರವೇರಿಸಿದರು.

ಕೂಡಿಗೆ: ಕೂಡಿಗೆಯ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಕೂಡಿಗೆ ವಲಯ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.

ಪ್ರತಿಭಾ ಕಾರಂಜಿ ಸಮಾರಂಭವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಉದ್ಘಾಟಿಸಿ ಮಾತನಾಡಿದರು. ಪ್ರತಿ ವಿದ್ಯಾರ್ಥಿಗಳಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಶಾಲೆಗಳಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಮುಂದಾಗಬೇಕು. ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲು ಮುಂದಾಗಬೇಕು. ಅದಕ್ಕನುಗುಣವಾಗಿ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರಚಿಮ್ಮಿಸುವ ಕೆಲಸವಾಗುತ್ತಿದೆ. ವಿದ್ಯಾರ್ಥಿಗಳು ವೇದಿಕೆಯನ್ನು ಸದ್ಭಳಸಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾತನಾಡಿ, ಇಂತಹ ಕಾರ್ಯಕ್ರಮಗಳು ನಡೆಯುವದರಿಂದ ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು, ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗುತ್ತದೆ ಎಂದರು.

ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ವೀಣಾ ವಿಜಯ ವಹಿಸಿದ್ದರು. ಕೂಡಿಗೆ ವಲಯದ 14 ಪ್ರಾಥಮಿಕ ಶಾಲೆಗಳ ಮತ್ತು 5 ಪ್ರೌಢಶಾಲೆಗಳ ವಿವಿಧ ಸಾಂಸ್ಕøತಿಕ ತಂಡಗಳು ಭಾಗವಹಿಸಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.

ಈ ಸಂದರ್ಭ ಸಿಆರ್‍ಪಿಗಳಾದ ಲೋಕೇಶ್, ಮುಬಿನಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪ ಕಾರ್ಯದರ್ಶಿ ನಬೀನಾ ಸೇರಿದಂತೆ ಎಲ್ಲಾ ಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಸೋಮವಾರಪೇಟೆ: ಪ್ರತಿಯೋರ್ವ ವಿದ್ಯಾರ್ಥಿಯೂ ಒಂದೊಂದು ಗಿಡವನ್ನು ನೆಟ್ಟು ಪೋಷಿಸುವ ಮೂಲಕ ಪರಿಸರದ ಬೆಳವಣಿಗೆಗೆ ಶ್ರಮಿಸಬೇಕೆಂದು ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್ ಹೇಳಿದರು.

ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ಇಕೋ ಕ್ಲಬ್ ಘಟಕದ ವತಿಯಿಂದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವಂತಹ ರಾಷ್ಟ್ರೀಯ ಸೇವಾಯೋಜನೆಯ ಚಟುವಟಿಕೆಗಳಲ್ಲಿ ಕ್ರೀಯಾತ್ಮಕವಾಗಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಅಂತೋಣಿರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಾಂಚಜನ್ಯ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್, ಕಾಲೇಜಿನ ಕಾರ್ಯಕ್ರಮ ಯೋಜನಾಧಿಕಾರಿ ಆನಂದ್, ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಮತ್ತಿತರರು ಇದ್ದರು.ಶನಿವಾರಸಂತೆ: ಹಿಂದಿನ ಗುರುಕುಲ ಪರಂಪರೆ ಇಂದಿಲ್ಲವಾದರೂ ಸಂಸ್ಕøತಿ, ಸಂಸ್ಕಾರ ಕಲಿಸುವ ಗುರು ಪರಂಪರೆ ಇಂದಿಗೂ ಜೀವಂತವಾಗಿದೆ ಎಂದು ಸಹಾಯಕ ರಾಜ್ಯಪಾಲ ನಾಗೇಶ್ ಅಭಿಪ್ರಾಯಪಟ್ಟರು.

ಸ್ಥಳೀಯ ಗುಡುಗಳಲೆಯ ಆರ್.ವಿ. ಕಲ್ಯಾಣ ಮಂಟಪದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಗುರು ವಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಕಟ್ಟುವ ಶಿಲ್ಪಿ ಶಿಕ್ಷಕ ಸಂಸ್ಕøತಿ-ಸಂಸ್ಕಾರದ ರೂವಾರಿಯಾಗಿದ್ದಾನೆ. ಆತ ಮಾಡುವ ವಿದ್ಯಾ ದಾನ ತ್ಯಾಗ ಮನೋಭಾವನೆಯ ಸಂಕೇತ ಎಂದು ನಾಗೇಶ್ ಹೇಳಿದರು.

ಮುಖ್ಯ ಅತಿಥಿ ಗೋಪಾಲಪುರ ಸಂತ ಅಂತೋಣಿ ಚರ್ಚ್‍ನ ಫಾದರ್ ಜೇಕಬ್ ಮಾತನಾಡಿ, ರೋಟರಿ ಜಾತ್ಯತೀತ ಮನೋಭಾವನೆಯ ಸೇವೆ ಸಲ್ಲಿಸುತ್ತಿದೆ. ಸಮಾಜದ ಯಾಂತ್ರಿಕ ಬದುಕಿನಲ್ಲಿ ಸಂಸ್ಥೆ ಸಮಸ್ಯೆಗೆ ಸ್ಪಂದಿಸುತ್ತಾ ಸಮಾಜಮುಖಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭ ನಿಡ್ತ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೋಸಿ ಹಾಗೂ ಅಂಕನಹಳ್ಳಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹೇಮಂತ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿದ್ಯಾರ್ಥಿನಿಯರಾದ ಕ್ರಿಸ್ಟಿನಾ ಮತ್ತು ಸುಸಾನ್ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿ, ರಂಜಿಸಿದರು.

ಸನ್ಮಾನಿತ ಮುಖ್ಯ ಶಿಕ್ಷಕ ಹೇಮಂತ್ ಕುಮಾರ್ ಮಾತನಾಡಿ, ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಶಾಲೆಗಳೊಂದಿಗೆ ಉತ್ತಮ ಬಾಂಧ್ವಯ ಹೊಂದಿದೆ. ಶಾಲೆಗಳಲ್ಲಿ ಇಂಟರ್ ಆ್ಯಕ್ಟ್ ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಮಾಜಸೇವೆಯ ಭಾವನೆಯನ್ನು ಮೂಡಿಸುತ್ತಿದೆ ಎಂದರು.

ಸನ್ಮಾನಿತ ಶಿಕ್ಷಕಿ ರೋಸಿ ಮಾತನಾಡಿ, ಸನ್ಮಾನಗಳು ಎಚ್ಚರಿಕೆಯ ಗಂಟೆ ಇದ್ದ ಹಾಗೆ. ಶಿಕ್ಷಕರ ಜ್ಞಾನ ಹಾಗೂ ಪ್ರತಿಭೆ ವಿದ್ಯಾರ್ಥಿಗಳಿಗೆ ನಿರ್ವಂಚನೆಯಿಂದ ಹಂಚುವಂತಹ ಮನೋಭಾವವನ್ನು ಪ್ರೇರೇಪಿಸುತ್ತದೆ ಎಂದರು. ರೋಟೇರಿಯನ್‍ಗಳಾದ ದಿವಾಕರ್, ಅರವಿಂದ್, ಶ್ವೇತಾ, ವಲಯ ಸೇನಾನಿ ವಸಂತ್‍ಕುಮಾರ್, ಸಂಸ್ಥೆ ಕಾರ್ಯದರ್ಶಿ ಚಂದನ್ ಹಾಗೂ ಉಪನ್ಯಾಸಕ ಚಂದ್ರಕಾಂತ್ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಶುಭು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಸ್ಯರು ಸ್ಪಂದಿಸುವಂತೆ ಕರೆ ನೀಡಿದರು. ನಿಕಟಪೂರ್ವ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್, ಕಾರ್ಯದರ್ಶಿ ಎ.ಡಿ. ಮೋಹನ್‍ಕುಮಾರ್, ರೋಟೇರಿಯನ್ ವನಿತಾ, ಪುಷ್ಪಾ, ಮಲ್ಲೇಶ್, ಸಂದೀಪ್ ಹಾಗೂ ಯೋಗೇಶ್ವರಿ ಹೇಮಂತ್ ಉಪಸ್ಥಿತರಿದ್ದರು.

ಗೋಣಿಕೊಪ್ಪ ವರದಿ: ಸಿಐಎಸ್‍ಸಿ ರಾಷ್ಟ್ರಮಟ್ಟದ ಬಾಲಕ, ಬಾಲಕಿಯರ ಶೂಟಿಂಗ್ ಸ್ಪರ್ಧೆಯಲ್ಲಿ ಜಯಗಳಿಸಿರುವ ಇಲ್ಲಿನ ಕಾಲ್ಸ್ ಶಾಲೆಯ ಮೂವರು ಕ್ರೀಡಾಪಟುಗಳು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯಲಿರುವ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ಅಹಮದಾಬಾದ್‍ನ ಮಿಲಿಟರಿ ಟ್ರೇನಿಂಗ್ ಅಕಾಡೆಮಿ ರೇಂಜ್‍ನಲ್ಲಿ ಆಯೋಜಿಸಿದ್ದ ಸಿಐಎಸ್‍ಸಿ ರಾಷ್ಟ್ರಮಟ್ಟದ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಕಾಲ್ಸ್ ಶಾಲೆಯ 16 ಕ್ರೀಡಾಪಟುಗಳು ಭಾಗವಹಿಸಿದ್ದರು. ಇವರಲ್ಲಿ ತರಾನ ರಮೇಶ್, ರೀಯಾ ಅಮಿತ್ ಹಾಗೂ ವಿತನ್ ಬೆಳ್ಳಿಯಪ್ಪ ಪದಕ ಪಡೆದು, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಆಶ್ರಯದಲ್ಲಿ ನಡೆಯಲಿರುವ ಟೂರ್ನಿಗೆ ಪ್ರವೇಶ ಪಡೆದುಕೊಂಡಿದ್ದಾರೆ.ಮಡಿಕೇರಿ: ಒಡಿಸ್ಸಾದ ರೂರ್ಕೆಲದಲ್ಲಿ ನಡೆದ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ತೋರುವ ಮೂಲಕ ಚಾಂಪಿಯನ್‍ಶಿಪ್ ಪಡೆದುಕೊಂಡಿದ್ದಾರೆ.

ಮೋನಿತ್ ಮೊಣ್ಣಪ್ಪ, ಕುಶನ್ ಕಾರ್ಯಪ್ಪ, ಟಿ.ಆರ್. ಅಶ್ವಥ್ ಹಾಗೂ ತನುಶ್ ಕುಟ್ಟಯ್ಯ ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳು. ಕಾಲ್ಸ್‍ನಲ್ಲಿ ನಡೆದ 2019-20ನೇ ಸಾಲಿನ 17 ವರ್ಷ ವಯೋಮಿತಿಯ ಐಸಿಎಸ್‍ಇ ಶಾಲೆಗಳ ಪ್ರಾಂತೀಯ ಮಟ್ಟದ ಅಂತರ್ ಶಾಲಾ ಹಾಕಿ ಪಂದ್ಯಾವಳಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಮೂರನೇ ಸ್ಥಾನವನ್ನು ಪಡೆದರು. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದ ನಾಲ್ವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.

ಪಂದ್ಯದಲ್ಲಿ ಆಯ್ಕೆ ಸಮಿತಿಯ ಗಮನ ಸೆಳೆದ ಶಾಂತೆಯಂಡ ತನುಶ್ ಕುಟ್ಟಯ್ಯ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾನೆ.

ಕೂಡಿಗೆ: ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹತ್ತನೆ ತರಗತಿ ವಿದ್ಯಾರ್ಥಿನಿ ಐ.ಜಿ. ಪೊನ್ನಮ್ಮ ವೀರಾಜಪೇಟೆಯಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಶಿವಮೊಗ್ಗದಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಮಡಿಕೇರಿ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‍ನ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಚುನಾವಣಾ ಸಾಕ್ಷರತಾ ಕ್ಲಬ್‍ಅನ್ನು ಉದ್ಘಾಟಿಸಿ ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಿ, ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಡಿ.ಜೆ. ಜವರಪ್ಪ ಪ್ರಜಾಪ್ರಭುತ್ವದ ಯಶಸ್ವಿಯಲ್ಲಿ ಯುವ ಮತದಾರರ ಪಾತ್ರ ಮುಖ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಡಿ.ಕೆ. ಸರಸ್ವತಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಕೆ. ಮಹೇಶ್ ಉಪಸ್ಥಿತರಿದ್ದರು. ಚುನಾವಣಾ ಸಾಕ್ಷರತಾ ಕ್ಲಬ್‍ನ ಸಂಚಾಲಕಿ ಹೆಚ್.ಪಿ. ನಿರ್ಮಲ ಪ್ರಾಸ್ತಾವಿಕ ಭಾಷಣ ಮಾಡಿದರು. ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಕನ್ನಿಕಾ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾರ್ಥನೆಯನ್ನು ನಿಮ್ಯ, ಸ್ವಾಗತ ಭಾಷಣವನ್ನು ಬಿಂದು, ವಂದನಾರ್ಪಣೆಯನ್ನು ಹೆಚ್.ಆರ್. ಕವಿತಾ, ಕಾರ್ಯಕ್ರಮದ ನಿರೂಪಣೆಯನ್ನು ಎ. ಹರ್ಷಿತಾ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ವರ್ಗದವರು, ವಿದ್ಯಾರ್ಥಿನಿಯರು ಹಾಜರಿದ್ದರು.

ಪೊನ್ನಂಪೇಟೆ: ಇತ್ತೀಚೆಗೆ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಹಾತೂರು ಪ್ರೌಢಶಾಲೆಯ ವಿದ್ಯಾರ್ಥಿ ವೈ.ಆರ್. ಮಣಿ 100 ಮೀ. ಹಾಗೂ 200 ಮೀ. ಓಟದಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ಕೊಳ್ಳುವ ಮೂಲಕ ಪ್ರೌಢ ಶಾಲಾ ವಿಭಾಗದ ಅಥ್ಲೆಟಿಕ್ಸ್‍ನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾನೆ. 400x100 ಮೀ. ರಿಲೇಯಲ್ಲಿ ಮಣಿ, ಪವನ್, ಶಿವು ಹಾಗೂ ಪುನೀತ್ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಕ ಎಂ.ಜಿ. ದೇವಯ್ಯ ತರಬೇತಿ ನೀಡಿದ್ದು, ತಂಡದ ಮ್ಯಾನೇಜರ್ ಆಗಿ ವಿ.ಸಿ. ಸುದೀಪ್ ಕಾರ್ಯನಿರ್ವಹಿಸಿದ್ದರು.

ವೀರಾಜಪೇಟೆ: ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಗೋಣಿಕೊಪ್ಪಲು ಸಮೀಪದ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ನೂತನ್, ಸಾಕ್ಷಿತ್, ಶ್ಯಾನ್ ಜೋಗಪ್ಪ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿಗಳಾದ ಜೀವನ್ ಹಾಗೂ ಆಯುಷ್ ಮುರಳಿ, ಪ್ರಾಥಮಿಕ ವಿಭಾಗದ ವಿದ್ಯಾರ್ಥಿ ಚೆಂಬಾಂಡ ಸಿ. ಭೀಮಯ್ಯ ಜಿಲ್ಲಾಮಟ್ಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.