ಮಡಿಕೇರಿ, ಸೆ. 19: ಕರ್ನಾಟಕ ಸರಕಾರ ಕೊಡಗಿನಲ್ಲಿ ಕಾವೇರಿ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕು ರಚನೆಯ ಆದೇಶ ಹೊರಡಿಸಿದ ಹಿನ್ನೆಲೆ ಈ ಎರಡು ನೂತನ ತಾಲೂಕುಗಳಲ್ಲಿ ಒಕ್ಕಲಿಗರ ಸಂಘವನ್ನು ಸ್ಥಾಪಿಸಲು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ನಿರ್ಧರಿಸಿದೆ.

ಸಂಘದ ಬಲವರ್ಧನೆಯ ದೃಷ್ಟಿಯಿಂದ ಜಿಲ್ಲೆಯ 16 ಹೋಬಳಿಗಳಲ್ಲೂ ಸಂಘವನ್ನು ರಚಿಸಲಾಗುವದು ಎಂದು ಅಧ್ಯಕ್ಷ ಎಸ್.ಎಂ. ಚಂಗಪ್ಪ ತಿಳಿಸಿದ್ದಾರೆ. ಪೂರ್ವಭಾವಿಯಾಗಿ ತಾ. 21 ರಂದು ಅಪರಾಹ್ನ 3.30 ಗಂಟೆಗೆ ಕುಶಾಲನಗರದ ಕನ್ನಿಕಾ ಇಂಟರ್ ನ್ಯಾಷನಲ್ ಸಭಾಂಗಣದಲ್ಲಿ ಕಾವೇರಿ ತಾಲೂಕಿನ ಒಕ್ಕಲಿಗ ಕುಲಬಾಂಧವರ ಸಭೆಯನ್ನು ಕರೆಯಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ಕೆ.ಕೆ. ಮಂಜುನಾಥ್ ಕುಮಾರ್, ವಿ.ಪಿ. ಶಶಿಧರ್, ಜಿ.ಆರ್. ಭುವನೇಂದ್ರ, ಟಿ.ಎಲ್. ಮಹೇಶ್ ಕುಮಾರ್, ಎ.ಪಿ. ಧರ್ಮಪ್ಪ, ಕೆ.ಪಿ. ಚಂದ್ರಕಲಾ, ಕುಶಾಲನಗರ ಹೋಬಳಿ ಒಕ್ಕಲಿಗ ವೇದಿಕೆಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಅವರುಗಳಿಗೆ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಚಂಗಪ್ಪ ತಿಳಿಸಿದ್ದಾರೆ.