ಕುಶಾಲನಗರ, ಸೆ. 19: ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿರುವ ಕಟ್ಟಡದ ಕೊಠಡಿಯೊಂದರಲ್ಲಿ ಕಾಳಿ ದೇವಿಯ ವಿಗ್ರಹ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಮಹಿಳೆ ಯೊಬ್ಬಳು ಆಗ್ರಹಿಸಿ ಕೊಠಡಿಯ ಬೀಗ ಮುರಿಯಲು ಯತ್ನಿಸಿದ ಪ್ರಸಂಗ ನಡೆಯಿತು.

ಕುಶಾಲನಗರ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಪಂಚಾಯಿತಿ ಕಚೇರಿ ಆವರಣದಲ್ಲಿ ಕೊಠಡಿಯಲ್ಲಿ ದೇವರ ವಿಗ್ರಹಗಳು ಭೂಮಿಯ ಅಡಿಯಲ್ಲಿ ಹುದುಗಿರುವದಾಗಿ ಕಳೆದ ಕೆಲವು ಸಮಯಗಳಿಂದ ಮಹಿಳೆ ಮುಬೀನ್ ತಾಜ್ ಎಂಬಾಕೆ ಪ.ಪಂ. ಅಧಿಕಾರಿಗಳಿಗೆ ಪತ್ರ ಮುಖಾಂತರ ತಿಳಿಸಿದ್ದು ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು. ತನ್ನ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆ ಮುಬೀನ್ ತಾಜ್ ಕೊಠಡಿಯ ಬೀಗ ಮುರಿಯಲು ತೆರಳಿದ ಸಂದರ್ಭ ಪಂಚಾಯಿತಿ ಅಧಿಕಾರಿಗಳು ಅವಕಾಶ ನೀಡದೆ ಪೊಲೀಸರಿಗೆ ದೂರು ನೀಡಿದರು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಠಾಣಾಧಿüಕಾರಿಗಳಾದ ಸದಾಶಿವ ಮತ್ತು ನಂದೀಶ್ ಮಹಿಳೆಯನ್ನು ಸಮಾಧಾನಿಸಿ ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರುವದಾಗಿ ತಿಳಿಸಿದ ಹಿನ್ನೆಲೆ ಮಹಾಕಾಳಿ ಪ್ರಸಂಗಕ್ಕೆ ತಾತ್ಕಾಲಿಕವಾಗಿ ಇತಿಶ್ರೀ ಹಾಡಲಾಯಿತು.