ಮಡಿಕೇರಿ, ಸೆ.19: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018-19ನೇ ಸಾಲಿನಲ್ಲಿ ಒಟ್ಟು ರೂ.10,746.03 ಲಕ್ಷ ವಹಿವಾಟು ನಡೆಸುವದರೊಂದಿಗೆ ರೂ.20.75 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10ರಂತೆ ಲಾಭಾಂಶ ವಿತರಿಸಲು ಚಿಂತನೆ ನಡೆಸಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ತಿಳಿಸಿದ್ದಾರೆ.

ಸಂಘದ ಪ್ರಗತಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಘವು ಪ್ರಸಕ್ತ 1129 ಮಂದಿ ಎ ತರಗತಿಯ ಸದಸ್ಯರನ್ನು ಹೊಂದಿದ್ದು, ಸದಸ್ಯರಿಂದ ಒಟ್ಟು 112.08 ಲಕ್ಷ ರೂ. ಪಾಲು ಬಂಡವಾಳ ಸಂಗ್ರಹಿಸಿದೆ. ಕ್ಷೇಮನಿಧಿ ಸೇರಿ 172.21 ಲಕ್ಷ ರೂ. ಇತರ ನಿಧಿ ಹಾಗೂ ನಿರಖು ಠೇವಣಿ ಸಂಚಯ ಠೇವಣಿ ಮತ್ತು ಇತರ ನಿಧಿ ಸೇರಿ ಒಟ್ಟು 1072.50 ಲಕ್ಷ ರೂ.ಗಳನ್ನು ಹೊಂದಿದೆ ಎಂದು ಹೇಳಿದರು.

ಸಂಘದ ಪಾಲು ಬಂಡವಾಳದ ಪೈಕಿ 370.37 ಲಕ್ಷ ರೂ.ಗಳನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಪಾಲು ಹಣ, ಕ್ಷೇಮ ನಿಧಿ ಹಾಗೂ ನಿರಖು ಠೇವಣಿಯಲ್ಲಿ ಹಾಗೂ ಇತರ ಸಹಕಾರ ಸಂಸ್ಥೆಯಲ್ಲಿ ಪಾಲು, ನಿರಖು ಠೇವಣಿ ರೂಪದಲ್ಲಿ ಇರಿಸಲಾಗಿದೆ ಎಂದರು. ಹಿಂದಿನ ಆಡಳಿತ ಮಂಡಳಿಯ ಅವಧಿಯಲ್ಲಿ ನಷ್ಟ ಹಾಗೂ ಸುಮಾರು 21 ಲಕ್ಷ ರೂ. ಸಾಲದಲ್ಲಿದ್ದ ಸಂಘವನ್ನು ತನ್ನ ಆಡಳಿತಾವಧಿಯಲ್ಲಿ ಲಾಭಕ್ಕೆ ತರುವದರೊಂದಿಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸದಸ್ಯರ ಅವಶ್ಯಕತೆಗನುಗುಣವಾಗಿ 2019ರ ಮಾರ್ಚ್ ಅಂತ್ಯಕ್ಕೆ ಕೆಸಿಸಿ ಫಸಲು ಸಾಲ ಸೇರಿದಂತೆ ಸುಮಾರು ರೂ. 1603.48 ಲಕ್ಷ ಸಾಲವನ್ನು ಸದಸ್ಯರಿಗೆ ನೀಡಲಾಗಿದ್ದು, ಅತಿವೃಷ್ಟಿಯಿಂದಾಗಿ ಫಸಲು ನಷ್ಟ, ಕೃಷಿ ಉತ್ಪನ್ನಗಳ ಬೆಲೆ ಇಳಿಕೆಯಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದ್ದರೂ, ಸಂಘದ ಸದಸ್ಯರು ಶೇ.100ರಷ್ಟು ಕೆಸಿಸಿ ಫಸಲು ಸಾಲವನ್ನು ಮರುಪಾವತಿಸಿದ್ದಾರೆ ಎಂದು ತಿಳಿಸಿದರು.

ಗ್ರಾಹಕರಿಗೆ ಬೇಕಾದ ರಸಗೊಬ್ಬರ, ಕ್ರಿಮಿನಾಶಕ, ಹತ್ಯಾರು, ಸಿಮೆಂಟ್ ಹಾಗೂ ಇತರ ಅಗತ್ಯ ಸಾಮಾಗ್ರಿಗಳನ್ನು ಮಾರಾಟ ಮಾಡಿ ರೂ.423.83 ಲಕ್ಷ ವಹಿವಾಟು ನಡೆಸಿದ್ದು ಆ ಮೂಲಕ ರೂ.15.14 ಲಕ್ಷ ಲಾಭ ಗಳಿಸಿದೆ. ಆದರೆ ಕಳೆದ ಸಾಲಿಗೆ ಹೋಲಿಕೆ ಮಾಡಿದರೆ ಈ ಬಾರಿ ಸುಮಾರು 10 ಲಕ್ಷದಷ್ಟು ಕಡಿಮೆ ಲಾಭ ಬಂದಿದ್ದು, ಇದಕ್ಕೆ ರೈತರ ಆರ್ಥಿಕ ಮಟ್ಟ ಕುಸಿದು, ತೋಟ, ಗದ್ದೆಗಳಿಗೆ ಗೊಬ್ಬರ ಹಾಕುವದನ್ನು ಕಡಿಮೆ ಮಾಡಿರುವದು ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಾಲಮನ್ನಾ ಸೌಲಭ್ಯ ಅಲಭ್ಯ

ಸಂಘದ ಒಟ್ಟು 416 ಮಂದಿ ಸದಸ್ಯರು ಸಾಲ ಪಡೆದಿದ್ದು, ಈ ಪೈಕಿ ಸರಕಾರ ಸಾಲ ಮನ್ನಾ ಯೋಜನೆಯಡಿ ಕೇವಲ 124 ಮಂದಿಯನ್ನು ಮಾತ್ರ ಆಯ್ಕೆ ಮಾಡಿದೆ. ಅಲ್ಲದೆ ಆಯ್ಕೆಯಾದವರ ಪೈಕಿ 93 ಮಂದಿಗೆ ಮಾತ್ರ ಸಾಲ ಮನ್ನಾದ ಹಣ ಬಿಡುಗಡೆ ಮಾಡಿದೆ. ಉಳಿದವರಿಗೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದÀರು. ಕುಮಾರಸ್ವಾಮಿ ನೇತೃತ್ವದ ಸರಕಾರ ಜಾರಿಗೆ ತಂದ ಸಾಲಮನ್ನಾ ಯೋಜನೆಯಿಂದ ರೈತರಿಗೆ ಭಾರೀ ಅನ್ಯಾಯವಾಗಿದೆ ಎಂದು ಮಣಿ ಉತ್ತಪ್ಪ ದೂರಿದರು.

ಇದರೊಂದಿಗೆ ಸರಕಾರದ ಸಾಲ ಮನ್ನಾ ಯೋಜನೆಯಡಿ ಸಂಘಕ್ಕೆ ಸುಮಾರು ರೂ.16 ಲಕ್ಷ ನೀಡಲು ಸರಕಾರ ಬಾಕಿ ಉಳಿಸಿಕೊಂಡಿದೆ ಎಂದರು.

ನೂತನ ಕಟ್ಟಡ

ಕಟ್ಟಡದ ಮುಂಭಾಗದಲ್ಲಿ ಮೂರು ವ್ಯಾಪಾರ ಮಳಿಗೆ ಹಾಗೂ ಹಿಂಭಾಗದಲ್ಲಿ ಅತಿಥಿಗೃಹ ನಿರ್ಮಿಸಲು ನಿರ್ಧರಿಸಲಾಗಿದೆ. ಸಂಘದ ನರೇಂದ್ರ ಮೋದಿ ಸಹಕಾರ ಭವನವನ್ನು 33.85 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವದು ಎಂದು ತಿಳಿಸಿದರು

ಭವನ ನಿರ್ಮಾಣಕ್ಕೆ ಸಂಸದ ಪ್ರತಾಪ್‍ಸಿಂಹ ಅವರು ನೀಡಿರುವ 5 ಲಕ್ಷ ರೂ.ಗಳ ನೆರವು ಇನ್ನೂ ಕೂಡ ಬಂದಿಲ್ಲ ಎಂದರು.

ಸಂಸದ ಪ್ರತಾಪ್‍ಸಿಂಹ ಅವರು ಕೊಡಗಿನ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ದೇಶಕ್ಕೆ ವಿಯೆಟ್ನಾಂನಿಂದ ಕರಿಮೆಣಸು ಆಮದಾಗುವದನ್ನು ತಡೆಯಲು ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕಾಫಿ ಬೆಳೆಗಾರರಿಗೆ ಕೇಂದ್ರ ಸರಕಾರದಿಂದ ಆರ್ಥಿಕ ನೆರವು ಕೊಡಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವದರೊಂದಿಗೆ ಕೊಡಗಿನ ಜನತೆಯ ಸಂಕಷ್ಟವನ್ನು ಪರಿಹರಿಸಬೇಕು ಎಂದು ಮಣಿಉತ್ತಪ್ಪ ಒತ್ತಾಯಿಸಿದರು.

ತಾ.23 ರಂದು ಮಹಾಸಭೆ

ತಾ.23 ರಂದು ಬೆಳಗ್ಗೆ 10 ಗಂಟೆಗೆ ಸಂಘದ ಮಹಾಸಭೆ ನರೇಂದ್ರಮೋದಿ ಸಹಕಾರ ಭವನದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಮರದಾಳು ಎಸ್.ಉಲ್ಲಾಸ್, ನಿರ್ದೇಶಕರಾದ ಕಣಜಾಲು ಕೆ.ಪೂವಯ್ಯ, ಪೇರಿಯನ ಎಸ್.ಪೂಣಚ್ಚ ಹಾಗೂ ಟಿ.ಎಸ್.ಧನಂಜಯ ಉಪಸ್ಥಿತರಿದ್ದರು.