ಸೋಮವಾರಪೇಟೆ, ಸೆ. 19: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟಗೊಂಡಿರುವ ರೈತರಿಗೆ ಈವರೆಗೆ ಸೂಕ್ತ ಪರಿಹಾರ ಸಿಕ್ಕಿರುವದಿಲ್ಲ. ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸರಕಾರದಿಂದ ಪರಿಹಾರ ಒದಗಿಸಬೇಕೆಂದು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ ಆಗ್ರಹಿಸಿದರು.

ಇಲ್ಲಿನ ತಾಲೂಕು ಕಾಫಿ ಬೆಳೆಗಾರರ ಸಂಘದ ಕಚೇರಿಯಲ್ಲಿ ನಡೆದ ತಾಲೂಕಿನ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ಸಾಲಿನ ಮಹಾ ಮಳೆಯಿಂದ ರೈತರು ಹಾಗೂ ಕಾಫಿ ಬೆಳೆಗಾರರ ತೋಟ ಮತ್ತು ತೋಟಗಾರಿಕಾ ಬೆಳೆಗಳು ನಷ್ಟಗೊಂಡಿದೆ. ಆದರೆ, ಪರಿಹಾರ ದೊರೆತಿಲ್ಲ. ಹಿಂದಿನ ಸರಕಾರವು ಸಹಕಾರ ಸಂಘಗಳ ಒಂದು ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದ್ದು, ಈವರೆಗೆ ಕೆಲವೇ ರೈತರ ಸಾಲ ಮನ್ನಾ ಆಗಿದೆ ಎಂದರು.

ಈಗಾಗಲೇ ಕಾಫಿ ಬೆಳೆಗಾರರು ದರ ಕುಸಿತದಿಂದಾಗಿ ಸಂಕಷ್ಟದಲ್ಲಿದ್ದಾರೆ. ಭೂ ಕುಸಿತದಿಂದ ತೋಟದೊಂದಿಗೆ ಮನೆಗಳನ್ನು ಕಳೆದುಕೊಂಡಿರುತ್ತಾರೆ. ಅತಿವೃಷ್ಟಿ ಮಳೆಯಿಂದಾಗಿ ಮೆಣಸು ಬಳ್ಳಿಗಳೂ ಸಂಪೂರ್ಣ ನಶಿಸಿ ಹೋಗಿವೆ. ಬೆಳೆಗಾರರಿಗೆ ಆದಾಯವೇ ಇಲ್ಲದೆ, ಸಾಲ ತೀರುವಳಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಕಾಫಿ ಬೆಳೆಗಾರರ ಸಾಲ ಮತ್ತು ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡುವಂತೆ ಮುಖ್ಯಮಂತ್ರಿಗಳು ಹಾಗೂ ಸಹಕಾರ ಸಚಿವರಿಗೆ ಪತ್ರ ಬರೆಯುವಂತೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಎಸ್.ಸಿ. ಪ್ರಕಾಶ್, ಉಪಾಧ್ಯಕ್ಷ ಲವ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.