ಮಡಿಕೇರಿ, ಸೆ. 19: ಅಹ್ಮದಿಯಾ ಮುಸ್ಲಿಂ ಜಮಾಅತ್ತಿನ ಕರ್ನಾಟಕ ದಕ್ಷಿಣ ವಲಯ ಮಹಿಳಾ ಘಟಕ ಹಾಗೂ ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್ತಿನ ಮಹಿಳಾ ಘಟಕ ಇವರ ಸಹಯೋಗದಲ್ಲಿ ತಾ.22ರ ಭಾನುವಾರ ಮಡಿಕೇರಿಯಲ್ಲಿ ಮಹಿಳಾ ಸರ್ವಧರ್ಮ ಮೈತ್ರಿ ಸಮ್ಮೇಳನ ಜರುಗಲಿದೆ. ನಗರದ ವಾಣಿಜ್ಯೋಧ್ಯಮಿಗಳ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಈ ಸಮ್ಮೇಳನದ ಅಧ್ಯಕ್ಷತೆಯನ್ನು ಅಹ್ಮದಿಯಾ ಮುಸ್ಲಿಂ ಜಮಾಅತ್ತಿನ ಮಹಿಳಾ ಘಟಕದ ರಾಷ್ಟ್ರೀಯ ಉಪಾಧ್ಯಕ್ಷೆ ನುಸ್ರತ್ ಮಹಮೂದ್ ವಹಿಸಲಿದ್ದಾರೆ.

ಮುಖ್ಯ ಅತಿಥಿಯಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ನೂರುನ್ನೀಸ, ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮಿಪ್ರಿಯ, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥೆ ಡಾ.ಕವಿತಾ ರೈ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಪುಷ್ಪಾ ಕುಟ್ಟಣ್ಣ ಹಾಗೂ ಮಡಿಕೇರಿಯ ಸಂತ ಮೈಕಲರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಪ್ರತಿಮಾ ರಾಡ್ರಿಗಸ್ ಭಾಗವಹಿಸಲಿದ್ದಾರೆ. ವಿವಿಧ ಧರ್ಮಗಳ ನಡುವೆ ಶಾಂತಿ, ಸೌಹಾರ್ಧ ಮೂಡಿಸಿ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದು ಅಹ್ಮದಿಯಾ ಮುಸ್ಲಿಂ ಜಮಾಅತ್ತಿನ ಮಹಿಳಾ ವಿಭಾಗದ ಮಡಿಕೇರಿ ಘಟಕದ ಅಧ್ಯಕ್ಷೆ ನಸೀರಾ ರಫೀಕ್ ತಿಳಿಸಿದ್ದಾರೆ.