ಒಡೆಯನಪುರ: ಸಮೀಪದ ಶನಿವಾರಸಂತೆ ಸುಪ್ರಜ ಗುರುಕುಲ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ 7ನೇ ತರಗತಿ ವಿದ್ಯಾರ್ಥಿನಿ ಗಾನವಿ ಇತ್ತೀಚೆಗೆ ನಡೆದ ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉದ್ದ ಜಿಗಿತದಲ್ಲಿ ಪ್ರಥಮ ಹಾಗೂ 100 ಮತ್ತು 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾಳೆ.

ಈ ಕುರಿತಾಗಿ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಾನವಿಗೆ ಫಲಕ ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಈ ಸಂದರ್ಭ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಡಿ. ಸುಜಲಾದೇವಿ, ವಿದ್ಯಾಸಂಸ್ಥೆ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್, ತರಬೇತುದಾರ ಶಿಕ್ಷಕರಾದ ಅರುಣ್‍ಕುಮಾರ್, ಉಮೇಶ್ ಮುಂತಾದವರು ಹಾಜರಿದ್ದರು.

ಮೂರ್ನಾಡು: ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಆಯೋಜಿಸಲಾಗುವ ಶಿಬಿರಗಳ ಸಂಪೂರ್ಣ ಪ್ರಯೋಜನ ಪಡೆದುಕೊಂಡರೆ ಮುಂದೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ಮೂರ್ನಾಡು ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ಹೇಳಿದರು.

ಪದವಿ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಎರಡು ದಿನಗಳ ನಾಯಕತ್ವ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಉತ್ತಮ ಅಡಿಪಾಯವಾಗಿರುತ್ತದೆ. ಶಿಬಿರಗಳನ್ನು ಸದುಪಯೋಗಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು.

ಮುಂಬೈನ ಎಂ.ಆರ್. ಪೈ ಫೌಂಡೇಶನ್‍ನ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿವೇಕ್ ಪಾಟ್ಕಿ ಮತ್ತು ರಾಜೀವ್ ಕುಮಾರ್ ನಾಯಕತ್ವ ಶಿಬಿರದ ಕುರಿತು ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಮಾತನಾಡಿ, ಕೇವಲ ಪಠ್ಯ ಪುಸ್ತಕಗಳು, ಅಂಕಗಳು ಮಾತ್ರ ಈಗಿನ ಸ್ಪರ್ಧಾತ್ಮಕ ಯುಗಕ್ಕೆ ಸಾಲದು. ಕೆಲವು ವಿಶೇಷ ಕಲೆ-ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ಅಂತರಿಕ ಗುಣಮಟ್ಟ ಸಮಿತಿ ಸಂಚಾಲಕ ನಾಟೋಳಂಡ ನವೀನ್, ಉಪನ್ಯಾಸಕ ನೆರಪಂಡ ಹರ್ಷ ಮಂದಣ್ಣ, ಸಾದೇರ ದರ್ಶನ್ ಮಾದಪ್ಪ ಉಪಸ್ಥಿತರಿದ್ದರು.

ಸೋಮವಾರಪೇಟೆ: ರಾಷ್ಟ್ರೀಯ ಹಸಿರು ಪಡೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಕಾರ್ಯಕ್ರಮದಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕದ ಆಶ್ರಯದಲ್ಲಿ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಮತ್ತು ವಿಜ್ಞಾನ ಸಂಘದ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ವಿಶ್ವ ಓಝೋನ್ ದಿನ ಆಚರಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್, ವಿಶ್ವ ಓಝೋನ್ ದಿನವು ಓಝೋನ್ ಪದರದ ಮಹತ್ವ, ಪರಿಸರ ಮತ್ತು ಮಾನವ ಜೀವನದ ಮೇಲೆ ಇದರ ಪಾತ್ರವನ್ನು ತಿಳಿಸುತ್ತದೆ. ಈ ದಿಸೆಯಲ್ಲಿ ಓಜೋನ್ ಪದರ ರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಓಝೋನ್ ಪದರವು ಭೂಮಿಯನ್ನು ಸೂರ್ಯನ ಕಿರಣಗಳ ಹಾನಿಕಾರಕ ಭಾಗದಿಂದ ರಕ್ಷಿಸುತ್ತದೆ. ಇದರಿಂದ ಭೂ ಗ್ರಹದ ಜೀವಿಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಕಲ ಜೀವರಾಶಿಗಳ ರಕ್ಷಾ ಕವಚ ಓಝೋನ್ ವಲಯ ಆಗಿದ್ದು, ಅದನ್ನು ಕಾಪಾಡಿಕೊಳ್ಳುವದು ಮನುಷ್ಯನ ಆದ್ಯ ಕರ್ತವ್ಯವಾಗಿದೆ ಎಂದರು. ಓಝೋನ್ ಪದರದ ಮಹತ್ವ ಕುರಿತು ಶಾಲೆಯ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಕೆ. ಯಶೋಧ ಮಾಹಿತಿ ನೀಡಿದರು. ಪರಿಸರ ಪ್ರತಿಜ್ಞಾ ವಿಧಿಯನ್ನು ಶಾಲಾ ಪ್ರಭಾರ ಮುಖ್ಯ ಶಿಕ್ಷಕ ವೆಂಕಟೇಶ್ ನಾಯ್ಕ್ ಬೋಧಿಸಿದರು. ಗರ್ವಾಲೆ ಗ್ರಾ.ಪಂ. ಕಾರ್ಯದರ್ಶಿ ಶ್ರೀನಿವಾಸ್, ಪ್ರೌಢಶಾಲಾ ಶಿಕ್ಷಕರಾದ ರವೀಂದ್ರ ಅಂಟರದಾನಿ, ಕೆ.ಎ. ಅಮೀನಾ, ಪ್ರಾಥಮಿಕ ಶಾಲೆಯ ಶಿಕ್ಷಕ ಎಂ.ಟಿ. ಪೂವಯ್ಯ, ಇತರರು ಇದ್ದರು. ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ನಂತರ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ ಓಝೋನ್ ಪದರ ರಕ್ಷಣೆಗೆ ಸಂಬಂಧಿಸಿದಂತೆ ಘೋಷಣೆಗಳನ್ನು ಕೂಗಿದರು. ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು.

*ಗೋಣಿಕೊಪ್ಪಲು: ಪೌಷ್ಟಿಕ ಆಹಾರ ತಯಾರಿಕೆ, ಸೀಮಂತ, ಅನ್ನಪ್ರಸನ್ನ, ಅಕ್ಷರಾಭ್ಯಾಸ ಸೇರಿದಂತೆ ಗರ್ಭಿಣಿ ಬಾಣಂತಿಯರಿಗೆ ಸಲಹೆ ಸೂಚನೆಗಳನ್ನು ಪ್ರಧಾನ ಮಂತ್ರಿ ಪೆÇೀಷಣಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ನಡೆಸಲಾಯಿತು.

ತಿತಿಮತಿ, ನೆಲ್ಲಿಕಾಡು ಪ್ರಾಥಮಿಕ ಶಾಲಾ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಈ ಸಲಹೆಗಳನ್ನು ನೀಡಲಾಯಿತು. ಕಾರ್ಯಕ್ರಮವನ್ನು ದೇವರಪುರ ಗ್ರಾಮ ಪಂಚಾಯಿತಿ ಸದಸ್ಯ ಕಿರಣ್ ಕುಮಾರ್ ಉದ್ಘಾಟಿಸಿದರು. ತಾ.ಪಂ. ಸದಸ್ಯೆ ಆಶಾ ಜೇಮ್ಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿತಿಮತಿ ಗ್ರಾ.ಪಂ. ಸದಸ್ಯ ಅನೂಪ್, ಸಿ.ಡಿ.ಪಿ.ಓ. ಸೀತಾಲಕ್ಷ್ಮಿ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ತಿತಿಮತಿ ವೈದ್ಯಾಧಿಕಾರಿ ಡಾ. ಹೊಸಮನಿ, ಡಿ.ಹೆಚ್.ಇ.ಓ. ಶಿವಯ್ಯ, ವಸಂತ್‍ಕುಮಾರ್ ಹಾಗೂ ಶಾಲಾ ಮೂಖ್ಯೋಪಾಧ್ಯಾಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಗುಡ್ಡೆಹೊಸೂರು: ಇಲ್ಲಿನ ಶಾಲಾ ಮಕ್ಕಳಿಗೆ ಬೆಂಗಳೂರಿನ ರಿಪಬ್ಲಿಕ್ ರೈಡರ್ಸ್ ಮೋಟಾರ್ ಸೈಕಲ್ ಕ್ಲಬ್ ವತಿಯಿಂದ ಬ್ಯಾಗ್ ವಿತರಿಸಲಾಯಿತು.

ಕಳೆದ ವರ್ಷವು ಕೂಡ ಕ್ಲಬ್‍ನ ಸದಸ್ಯರು ಶಾಲೆಗೆ ಭೇಟಿ ನೀಡಿ ಪುಸ್ತಕ ಸಾಮಗ್ರಿಗಳನ್ನು ನೀಡಿದರು. ಸಮಾರಂಭದಲ್ಲಿ ಸರಕಾರದ ವತಿಯಿಂದ ನೀಡಲಾಗುವ ಪುಸ್ತಕ ಮತ್ತು ಇತರ ಸಾಮಗ್ರಿಗಳನ್ನು ಶಾಲೆಯ ಎಲ್ಲಾ ಮಕ್ಕಳಿಗೂ ನೀಡಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎಸ್. ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಸದಸ್ಯ ಬಿ.ಟಿ. ಪ್ರಸನ್ನ, ಎಸ್.ಡಿ.ಎಂ.ಸಿ.ಯ ಸದಸ್ಯರು ಮತ್ತು ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.

ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ಯಶುಮತಿ ಕಾರ್ಯಕ್ರಮ ನಿರೂಪಿಸಿದರು.

ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಸಂಘದ ಬಿ.ಟಿ.ಸಿ.ಜಿ. ಪದವಿಪೂರ್ವ ಕಾಲೇಜಿನ ಮತದಾರರ ಸಾಕ್ಷರತಾ ಸಂಘ ಮತ್ತು ಲಿಯೋ ಕ್ಲಬ್ ವತಿಯಿಂದ ಮತದಾರರ ಜಾಗೃತಿ ಜಾಥಾ ನಡೆಯಿತು.

ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ನಂತರ ಜೇಸೀ ವೇದಿಕೆಯ ಬಳಿ ಸಮಾವೇಶಗೊಂಡು ನಾಟಕದ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ಕಾಲೇಜು ಪ್ರಾಂಶುಪಾಲ ಹೆಚ್.ಎಸ್. ಶರಣ್ ಮಾತನಾಡಿ, ಮತದಾನ ಮಾಡುವದು ಪ್ರತಿಯೊಬ್ಬ ಭಾರತೀಯನ ಹಕ್ಕು.ಇದು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ.ಯಾರೂ ಮತದಾನದಿಂದ ವಂಚಿತರಾಗಬಾರದು ಎಂದರು.

ಮತದಾರರ ಜಾಗೃತಿ ಜಾಥಾ ಸಂಘದ ಅಧ್ಯಕ್ಷೆ ಪ್ರೀತಿ, ಲಿಯೋ ಕ್ಲಬ್ ಅಧ್ಯಕ್ಷ ಪ್ರೇಮ್, ಉಪನ್ಯಾಸಕರುಗಳಾದ ಪ್ರತಾಪ್, ಕುಮಾರ್, ಭವ್ಯ, ಸಹನಾ ಉಪಸ್ಥಿತರಿದ್ದರು.

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತದಾರ ಜಾಗೃತಿ ಜಾಥಾ ನಡೆಸಿದರು. ಕಾಲೇಜಿನಿಂದ ಹೊರಟ ವಿದ್ಯಾರ್ಥಿಗಳು ಶುದ್ಧ ಮತದಾರ ಪಟ್ಟಿ ಸಿದ್ಧಪಡಿಸಲು ಸಹಕರಿಸಿ, ಪರಿಶೀಲಿಸಿ-ನಿಮ್ಮ ವಿಳಾಸ, ಜನ್ಮದಿನಾಂಕ, ಫೋಟೋ ಸಹಿತ ಮತದಾರ ಪಟ್ಟಿ ಪರಿಶೀಲಿಸಿ ಎಂಬ ಘೋಷಣಾ ಫಲಕ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭ ಪ್ರಾಂಶುಪಾಲೆ ಬಿ.ಸಿ. ಪರಿಮಳ ಮಾತನಾಡಿ, ಪ್ರತಿಯೊಬ್ಬ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡುವದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುವದು. ಜತೆಗೆ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು. ಉಪನ್ಯಾಸಕ ಜಗದೀಶ್ ಬಾಬು, ಬಿ.ಎಸ್. ಪವಾರ್, ದೊರೆಸ್ವಾಮಿ ಹಾಗೂ ಸುಧೀರ್ ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಸಂದರ್ಭವೇ ಸಮಯ ಪಾಲನೆ, ಶ್ರದ್ಧೆ, ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ವೇದಿಕೆಯಾಗಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ಸಿಆರ್‍ಪಿ ಸತೀಶ್ ಮಾತನಾಡಿ, ಪ್ರತಿಭೆ ಎಲ್ಲರಲ್ಲೂ ಅಡಕವಾಗಿರುತ್ತದೆ. ಅಂತಹ ಪ್ರತಿಭೆಗಳನ್ನು ಹೊರತಂದು ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಮತ್ತು ಪ್ರತಿಭೋತ್ಸವ ಕಾರ್ಯಕ್ರಮಗಳು ಪ್ರಮುಖವಾಗಿದೆ. ವ್ಯಕ್ತಿ ಮತ್ತು ಶಾಲೆಗಳಿಗೆ ಪ್ರಾಶಸ್ತ್ಯ ನೀಡದೆ, ಮಕ್ಕಳ ಪ್ರತಿಭೆಗೆ ಆದ್ಯತೆ ನೀಡಬೇಕೆಂದರು.

ಅಧ್ಯಕ್ಷತೆಯನ್ನು ಸಾಂದೀಪನಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಟಿ. ದಾಮೋದರ್ ವಹಿಸಿದ್ದರು. ವೇದಿಕೆಯಲ್ಲಿ ಸಿಆರ್‍ಪಿ ಜಾನ್‍ಪಾಲ್ ಡಿಸೋಜ, ಮೈಸೂರು ವಿಭಾಗದ ಪ್ರಾಥಮಿಕ ಶಾಲಾ ಸಂಘದ ಉಪಾಧ್ಯಕ್ಷ ಶಿವಕುಮಾರ್, ಶಾಲಾ ಮುಖ್ಯಶಿಕ್ಷಕ ಮಾರ್ಷಲ್ ಲೋಬೋ, ಯಡೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಲ್.ಎಂ. ಪ್ರೇಮ ಸೇರಿದಂತೆ ವಿವಿಧ ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ನಾಟಕ, ಚಿತ್ರಕಲೆ, ಆಶುಭಾಷಣ ಸ್ಪರ್ಧೆ, ರಂಗೋಲಿ, ಜಾನಪದ ನೃತ್ಯ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು.ಹೆಬ್ಬಾಲೆ: ಸಮೀಪದ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಹೆಬ್ಬಾಲೆ ಕ್ಲಸ್ಟರ್ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಅನಾವರಣಗೊಂಡಿತು.

ಹೆಬ್ಬಾಲೆ ಕ್ಲಸ್ಟರ್ ವ್ಯಾಪ್ತಿಯ ತೊರೆನೂರು, ಶಿರಂಗಾಲ, ಕೂಡಿಗೆ ಸುತ್ತಮುತ್ತಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ, ಕಲಿಕೋತ್ಸವದಲ್ಲಿ ಪಾಲ್ಗೊಂಡು ವಿವಿಧ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಭರತನಾಟ್ಯ, ಸಮೂಹ ನೃತ್ಯ, ಜಾನಪದ ನೃತ್ಯ, ಚಿತ್ರಕಲೆ, ಛದ್ಮವೇಷ ಸ್ಪರ್ಧೆ, ಕಂಠಪಾಠ, ದೃಶ್ಯಕಲೆ, ಆಶುಭಾಷಣ ಸ್ಪರ್ಧೆ, ಭಾಷಣ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಕ್ಲೇಮಾಡಲಿಂಗ್, ನಾಟಕ, ಸಮೂಹ ಗೀತೆ, ಜಾನಪದ ಗೀತೆ, ಭಾವಗೀತೆ, ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಲಾಯಿತು. ಪ್ರತಿ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಪರಸ್ಪರ ಕುತೂಹಲ, ಆಸಕ್ತಿ ಹಾಗೂ ಸಂತೋಷದಿಂದ ಪಾಲ್ಗೊಂಡು ಸಂಭ್ರಮಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಎಆರ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಹೆಚ್.ಎಸ್. ರಘು ಮಾತನಾಡಿ, ಗ್ರಾಮೀಣ ಪ್ರದೇಶ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಲ್ಲೂ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವತೋಮುಖ ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಂಶುಪಾಲ ಹೆಚ್.ಹೆಚ್. ಸುಂದರ್ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಗತ್ಯ ಪ್ರೋತ್ಸಾಹ ನೀಡುವದು ಶಿಕ್ಷಕರು ಮತ್ತು ಪೋಷಕರ ಕರ್ತವ್ಯವಾಗಿದೆ ಎಂದರು. ಬಿಆರ್‍ಪಿ ಎಸ್.ವಿ. ಸಂತೋಷ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹೆಚ್.ಎಲ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಸ್ಥೆ ಪ್ರಾಂಶುಪಾಲ ಎನ್.ಎನ್. ಧರ್ಮಪ್ಪ, ಮುಖ್ಯ ಶಿಕ್ಷಕ ಹೆಚ್.ಎಸ್. ಗಣೇಶ್, ಗ್ರಾ.ಪಂ. ಸದಸ್ಯೆ ಸರೋಜಮ್ಮ, ನಿರ್ದೇಶಕರಾದ ಹೆಚ್.ಆರ್. ನಾಗೇಂದ್ರ, ಹೆಚ್.ಎಸ್. ಪುಟ್ಟೇಗೌಡ, ಹಿರಿಯ ಶಿಕ್ಷಕ ವೆಂಕಟನಾಯಕ್ ಉಪಸ್ಥಿತರಿದ್ದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸ್ಪರ್ಧಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇದೇ ಸಂದರ್ಭ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಗುಡ್ಡೆಹೊಸೂರು: ಇಲ್ಲಿನ ಐಶ್ವರ್ಯ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ತಂಡಗಳ ವಾಲಿಬಾಲ್ ಪಂದ್ಯಾಟ ನಡೆಯಿತು. ಪಂದ್ಯಾಟವನ್ನು ಐಶ್ವರ್ಯ ಪಿ.ಯು. ಕಾಲೇಜಿನ ಅಧ್ಯಕ್ಷ ಪುಲಿಯಂಡ ರಾಮ್ ದೇವಯ್ಯ ಉದ್ಘಾಟಿಸಿದರು. ಪಂದ್ಯಾಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದವು. ಬಾಲಕಿಯರ ಪಂದ್ಯದಲ್ಲಿ ಕೂಡಿಗೆಯ ಸರಕಾರಿ ಕಾಲೇಜು ಪ್ರಥಮ ಸ್ಥಾನ ಗಳಿಸಿದೆ. ದ್ವಿತೀಯ ಸ್ಥಾನವನ್ನು ಕುಶಾಲನಗರದ ಸರಕಾರಿ ಪದವಿಪೂರ್ವ ಕಾಲೇಜು ಪಡೆದುಕೊಂಡಿದೆ.

ಪೊನ್ನಂಪೇಟೆ: ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ನಡೆಯುತ್ತಿರುವ ಜಿಲ್ಲಾಮಟ್ಟದ ಕ್ರೀಡಾಕೂಟದ ಬಾಲಕಿಯರ ಕಬಡ್ಡಿ ವಿಭಾಗದಲ್ಲಿ ವೀರಾಜಪೇಟೆ ತಾಲೂಕಿನ ಬಾಳೆಲೆ ಕ್ಲಸ್ಟರ್‍ನ ಕೋತೂರು ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಫೈನಲ್ ಪಂದ್ಯದಲ್ಲಿ ಮಡಿಕೇರಿ ತಾಲೂಕಿನ ಗುಹ್ಯ ಸರ್ಕಾರಿ ಶಾಲೆ ವಿರುದ್ಧ 36-7 ಅಂಕಗಳಿಂದ ಉತ್ತಮ ಪ್ರದರ್ಶನ ನೀಡಿದ ಕೋತೂರು ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿನಿಯರಾದ ಪಿ.ಕೆ. ಸೌಮ್ಯ, ಸೆಲಿಸ್ಟಿನ್, ಜೆ.ಆರ್. ರೇವತಿ, ಪ್ರಮೀಳ, ಸ್ವಾತಿ, ದಿವ್ಯ, ಸೀತೆ, ಪಾರ್ವತಿ, ಲಕ್ಷ್ಮಿ, ನಂದಿತಾ ಹಾಗೂ ದಿವ್ಯ ಈ ಸಾಧನೆ ಮಾಡಿದ್ದಾರೆ. ಕಬಡ್ಡಿ ಮುಖ್ಯಸ್ಥರಾಗಿ ಮಹೇಶ್, ತೀರ್ಪುಗಾರರಾಗಿ ಚೌಹಾಣ್, ಪರಮೇಶ್ ಕಾರ್ಯ ನಿರ್ವಹಿಸಿದರು. ಮುಖ್ಯ ಶಿಕ್ಷಕರಾದ ಪ್ರಶಾಂತ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಮೂರ್ನಾಡು: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನದ ನಾಯಕತ್ವ ಶಿಬಿರವನ್ನು ನೆಡೆಸಲಾಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಉದ್ದೇಶದಿಂದ ಮುಂಬೈಯ ಎಂ.ಆರ್. ಪೈ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಂತರರಾಷ್ಟ್ರೀಯ ತರಬೇತುದಾರ ವಿವೇಕ್ ಪಟ್‍ಕೀ ಹಾಗೂ ರಾಜೀವ್ ಆಗಮಿಸಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸುವ ಮೂಲಕ ತರಬೇತಿ ನೀಡಿದರು.

ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ ಶಿಬಿರ ಉದ್ಘಾಟಿಸಿದರು. ಸಮಾರೋಪ ಸಮಾರಂಭಕ್ಕೆ ವಿದ್ಯಾಸಂಸ್ಥೆಯ ಖಜಾಂಚಿ ಬಡುವಂಡ ಸುಬ್ರಮಣಿ ಹಾಗೂ ನಿರ್ದೇಶಕಿ ತೇಲಪಂಡ ಶೈಲಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳುವದು ಅನಿವಾರ್ಯವಾಗಿದೆ ಹಾಗೂ ಪ್ರಸ್ತುತ ಸಮಾಜದ ರೀತಿ ನೀತಿಗಳ ಬಗ್ಗೆ ಕಿವಿಮಾತು ಹೇಳಿದರು.

ಕಾಲೇಜು ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ವಿದ್ಯಾರ್ಥಿಗಳಿಗೆ ಹಿತನುಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕ ನೆರಪಂಡ ಹರ್ಷ ಮಂದಣ್ಣ ಮಾಡಿದರೆ, ಹರೀಶ್ ಸ್ವಾಗತಿಸಿ, ಉಪನ್ಯಾಸಕ ನಾಟೋಳಂಡ ನವೀನ್ ವಂದಿಸಿದರು.ಗೋಣಿಕೊಪ್ಪಲು: ಪೆÇನ್ನಂಪೇಟೆ ಸಂತ ಅಂತೋಣಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ತಂಡ ಮಡಿಕೇರಿಯಲ್ಲಿ ಜರುಗಿದ ಜಿಲ್ಲಾಮಟ್ಟದ ಹಾಕಿ ಫೈನಲ್ಸ್‍ನಲ್ಲಿ ಪಾರಾಣೆ ಪ್ರೌಢಶಾಲಾ ತಂಡವನ್ನು 6-0 ಗೋಲುಗಳ ಅಂತರದಿಂದ ಸೋಲಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಪ್ರಾಂಶುಪಾಲ ರೆ.ಫಾ. ಡೇವಿಡ್ ಸಗಾಯರಾಜ್ ತಿಳಿಸಿದ್ದಾರೆ.

ಸಂತ ಅಂತೋಣಿ ಪ್ರೌಢಶಾಲಾ ಹಾಕಿ ತಂಡದ ನಾಯಕ ಗೌರವ್ ಒಳಗೊಂಡಂತೆ ತಂಡದ ವಚನ್, ಬಿಪಿನ್, ಆರ್ಯನ್, ಇಶಾನ್ ಹಾಗೂ ಶಶಾಂಕ್ ತಲಾ ಒಂದು ಗೋಲು ಗಳಿಸಿದರು. ವಿಭಾಗ ಮಟ್ಟದ ಹಾಕಿ ಪಂದ್ಯಾಟ ಅಕ್ಟೋಬರ್ 10 ರ ನಂತರ ಮಡಿಕೇರಿಯಲ್ಲಿ ಜರುಗಲಿದೆ.

ಸೋಮವಾರಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಮನ್ವಯಾಧಿಕಾರಿಗಳ ಕಚೇರಿಯ ಸಂಯುಕ್ತ ಆಶ್ರಯದಲ್ಲಿ ಮಾದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಚಾಲನೆ ನೀಡಿದರು. ನಂತರ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮಕ್ಕಳಲ್ಲಿನ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕಲಾ ಕೌಶಲ್ಯ ಬೆಳೆಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.

ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ವಹಿಸಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದರು.

ವೇದಿಕೆಯಲ್ಲಿ ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಎನ್. ಲತಾ, ಸದಸ್ಯರಾದ ಎಂ.ಎ. ಮಜೀದ್, ಪ್ರೇಮ, ಎಸ್‍ಡಿಎಂಸಿ ಅಧ್ಯಕ್ಷರಾದ ಕೆ.ಎಸ್. ಸವಿತಾ, ಮುಖ್ಯ ಶಿಕ್ಷಕಿ ಶೋಭಾ, ಸಿಆರ್ ಪಿ ಬಿ.ಎಸ್. ವಸಂತಕುಮಾರ್, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ಟಿ.ಜೆ. ಪ್ರೇಮ್‍ಕುಮಾರ್ ಉಪಸ್ಥಿತರಿದ್ದರು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಾಟಕ, ಚಿತ್ರಕಲೆ, ಆಶುಭಾಷಣ ಸ್ಪರ್ಧೆ, ರಂಗೋಲಿ, ಜಾನಪದ ನೃತ್ಯ ಸೇರಿದಂತೆ ಹಲವು ಸ್ಪರ್ಧೆಗಳು ನಡೆದವು.

ಗುಡ್ಡೆಹೊಸೂರು: ಇಲ್ಲಿನ ಐಶ್ವರ್ಯ ಪಿ.ಯು. ಕಾಲೇಜಿನ ಮೈದಾನದಲ್ಲಿ ಎರಡು ದಿನಗಳ ಕಾಲ ವಾಲಿಬಾಲ್ ಪಂದ್ಯಾಟ ನಡೆಯಿತು. ಅಂತಿಮ ಪಂದ್ಯಾಟ ಐಶ್ವರ್ಯ ಪಿ.ಯು. ಕಾಲೇಜು ಮತ್ತು ಕುಶಾಲನಗರದ ವಿವೇಕಾನಂದ ಕಾಲೇಜುಗಳ ನಡುವೆ ನಡೆಯಿತು. ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿ ವಿವೇಕಾನಂದ ಕಾಲೇಜು ತಂಡ ಪ್ರಥಮ ಸ್ಥಾನ ಗಳಿಸಿತು. ಐಶ್ವರ್ಯ ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿತು.