ಮಡಿಕೇರಿ, ಸೆ. 19: ನಿವೇಶನ ಹಾಗೂ ಜಾಗದ ಹಕ್ಕು ಪತ್ರಕ್ಕಾಗಿ ಅಕ್ರಮ - ಸಕ್ರಮ ಯೋಜನೆಯಡಿ 94 ಸಿ ಕಾಯ್ದೆಯಡಿ ಸಲ್ಲಿಸಲಾಗಿರುವ ಅರ್ಜಿಗಳ ಪೈಕಿ ತಿರಸ್ಕರಿಸಲ್ಪಟ್ಟಿರುವ ಅರ್ಜಿಗಳನ್ನು ಮರು ಪರಿಶೀಲಿಸು ವಂತೆ ಹಾಗೂ ಅಭಿವೃದ್ಧಿ ಕಾರ್ಯ ಗಳಿಗೆ ಅಡ್ಡಿಪಡಿಸದಂತೆ ಅಧಿಕಾರಿಗಳಿಗೆ ಶಾಸಕರುಗಳು ಸೂಚನೆ ನೀಡಿದ್ದಾರೆ.ಮಡಿಕೇರಿ ತಾಲೂಕಿನ 2019-20ನೇ ಸಾಲಿನ ಆಗಸ್ಟ್ ಅಂತ್ಯದವರೆಗಿನ ಪ್ರಗತಿ ಪರಿಶೀಲನಾ ಸಭೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಎಸ್‍ಜಿಎಸ್‍ವೈ ಸಭಾಂಗಣದಲ್ಲಿ ನಡೆಯಿತು. ಸಭೆಯ ಆರಂಭದಲ್ಲಿ ಶಾಸಕರು ಕಂದಾಯ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ಬಯಸಿದರು. 94 ಸಿ ಅಡಿಯಲ್ಲಿ ಎಷ್ಟು ಅರ್ಜಿಗಳು ಬಂದಿವೆ; ಎಷ್ಟು ವಿಲೇವಾರಿಯಾಗಿವೆ ಎಂದು ತಹಶೀಲ್ದಾರರಲ್ಲಿ ಕೇಳಿದರು. ಮಾಹಿತಿ ನೀಡಿದ ತಹಶೀಲ್ದಾರ್ ಮಹೇಶ್ ಅವರು, ಒಟ್ಟು 2443 ಅರ್ಜಿಗಳು ಬಂದಿದ್ದು, ಈ ಪೈಕಿ 530 ಮಂಜೂರಾತಿಯಾಗಿವೆ. 1653 ಅರ್ಜಿಗಳು ತಿರಸ್ಕøತಗೊಂಡಿರುವದಾಗಿ ತಿಳಿಸಿದರು.ಅಷ್ಟೊಂದು ಅರ್ಜಿಗಳ ತಿರಸ್ಕøತಗೊಳ್ಳಲು ಕಾರಣ ಕೇಳಿದಾಗ ಉತ್ತರಿಸಿದ ತಹಶೀಲ್ದಾರರು; ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇರುವದಾಗಿ ಹೇಳಿದರು. ಈ ಸಂದರ್ಭ ಅಸಮಾಧಾನಿತರಾದ ಶಾಸಕರು, ಸಿ. ಮತ್ತು ಡಿ. ಜಾಗವಾಗಿ ದ್ದರೆ ಅರಣ್ಯ ಇಲಾಖೆ ಬರುವದಿಲ್ಲ; ಅದನ್ನು ಹಿಂಪಡೆಯಲಾಗಿದೆ. 1653 ಮಂದಿಯ ಅರ್ಜಿಗಳನ್ನು ತಿರಸ್ಕರಿಸಿದರೆ, ಅವರುಗಳು ಎಲ್ಲಿಗೆ ಹೋಗಬೇಕು, ಈ ಬಗ್ಗೆ ಪರಿಶೀಲಿಸಿ ಅರಣ್ಯ ಇಲಾಖೆಯಿಂದ ಮಾಹಿತಿ ಪಡೆದುಕೊಳ್ಳುವಂತೆ ಹೇಳಿದರು. ಪಕ್ಕಾ ಅರಣ್ಯ ಜಾಗವಾಗಿದ್ದರೆ ನಮ್ಮದೇನು ತಕರಾರಿಲ್ಲ; ಸಿ. ಮತ್ತು ಡಿ. ಹಾಗೂ ಡೀಮ್ಡ್ ಜಾಗವಾಗಿದ್ದರೆ ತಿರಸ್ಕಾರ ಮಾಡುವ ಹಾಗೆ ಇಲ್ಲ; ಈ ಬಗ್ಗೆ ಪುನರ್ ಪರಿಶೀಲಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು.

ಅರಣ್ಯ ಇಲಾಖೆಗೆ ಸೂಚನೆ

ಸಭೆಯಲ್ಲಿ ಕಂದಾಯ ಇಲಾಖೆ ವಿಚಾರದ ಬಗ್ಗೆ ಪ್ರಸ್ತಾಪ ವಾಗುತ್ತಿರುವಾಗ ಅರಣ್ಯ ಇಲಾಖೆಯ ಆಕ್ಷೇಪಣೆ ಬಗ್ಗೆ ಶಾಸಕರುಗಳು ತೀರಾ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ಎದುರಾಯಿತು. ಸಭೆಯಲ್ಲಿದ್ದ ವಿಧಾನ ಪರಿಷತ್ತು ಸದಸ್ಯ ಸುನಿಲ್ ಸುಬ್ರಮಣಿ ಅವರು; ಎಲ್ಲದಕ್ಕೂ ಅರಣ್ಯ ಪ್ರದೇಶವೆಂದು ಅಡ್ಡಿಮಾಡುವದಾದರೆ ಅರಣ್ಯಭವನ, ಸುದರ್ಶನ ಅತಿಥಿಗೃಹ ಇರುವದು ಅರಣ್ಯ ಪ್ರದೇಶದಲ್ಲಿಯೇ. ಶಾಸಕ ಬೋಪಯ್ಯ ಅವರ ಮನೆ ಅರಣ್ಯ ಪ್ರದೇಶದಲ್ಲಿದೆ ಎಂದು ಹೇಳುವದಾದರೆ ಅವುಗಳನ್ನು ತೆರವುಗೊಳಿಸಿ ಎಂದು ಖಾರವಾಗಿ ನುಡಿದರು.

(ಮೊದಲ ಪುಟದಿಂದ) ಗಾಳಿಬೀಡಿನಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಓರ್ವ ಅಧಿಕಾರಿ ಅನುಮತಿ ನೀಡಿದ್ದರೆ ಮತ್ತೋರ್ವ ಅಧಿಕಾರಿ ರದ್ದು ಮಾಡಿದ್ದಾರೆ. ಈ ರೀತಿ ನಾಟಕ ಮಾಡುವದನ್ನು ನಿಲ್ಲಿಸುವಂತೆ ಹೇಳಿದರು. ಮಾಲ್ದಾರೆಯ ಗಿರಿಜನ ಹಾಡಿಗೆ ಒದಗಿಸಲಾಗಿದ್ದ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದೀರಾ ನಿಮ್ಮ ಈ ರೀತಿಯ ವರ್ತನೆಯನ್ನು ಜನರು ಇಷ್ಟಪಡುವದಿಲ್ಲವೆಂದರು.

ಮಧ್ಯಪ್ರವೇಶಿಸಿದ ವಿಧಾನ ಪರಿಷತ್ತು ಸದಸ್ಯೆ ವೀಣಾ ಅಚ್ಚಯ್ಯ ಅವರು, ಕೋಡಂಬೂರಿನಲ್ಲಿ ದೇವಾಲಯ ಕಟ್ಟಡ ದುರಸ್ತಿಗೆಂದು ತನ್ನ ಅನುದಾನದಲ್ಲಿ ರೂ. 1 ಲಕ್ಷ ಮೀಸಲಿರಿಸಿದ್ದು, ಅರಣ್ಯ ಇಲಾಖೆ ಕಟ್ಟಡ ನಿರ್ಮಿಸಲು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಣ ವಾಪಸ್ ಬಂದಿದೆ. ಎಷ್ಟೋ ವರ್ಷಗಳಿಂದ ದೇವಾಲಯ ಇದೆ. ದುರಸ್ತಿ ಪಡಿಸಲು ಈಗ ಯಾಕೆ ಅಡ್ಡಿಪಡಿಸುತ್ತಿದ್ದೀರಾ? ಹೀಗೆಲ್ಲ ಮಾಡಬೇಡಿ; ಎಷ್ಟೊಂದು ಬೈಗುಳ ಕೇಳ್ತೀರಾ... ನಿಮ್ಮ ಕಾನೂನನ್ನು ಸ್ವಲ್ಪ ಸಡಿಲ ಮಾಡಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುನಿಲ್ ಸುಬ್ರಮಣಿ ಅವರು, ಶಬರಿಮಲೈ ದೇವಾಲಯ ಕೂಡ ಅರಣ್ಯದೊಳಗಡೆ ಇದ್ದರೂ ಅಲ್ಲಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗು ತ್ತಿದೆ. ಕೊಡಗಿನಲ್ಲಿ ಮಾತ್ರ ಏಕೆ ಬೇರೆ ಕಾನೂನು? ಅಲ್ಲಿಗೆ ಕಾನೂನಿಲ್ಲ, ನಿಮಗೆ ಕೆಲಸ ಮಾಡಲು ಮನಸಿಲ್ಲ; ಮನಸಿದ್ದರೆ ಮಾಡಬಹುದು ಎಂದು ಹೇಳಿದರು.

ಮಧ್ಯಪ್ರವೇಶಿಸಿದ ಶಾಸಕ ಬೋಪಯ್ಯ ಅವರು, ಅರಣ್ಯ ಕಾಯ್ದೆಯ ಆದೇಶದಲ್ಲಿ ಏನಿದೆ ಎಂಬದೇ ನಿಮಗಳಿಗೆ ಗೊತ್ತಿಲ್ಲ, ಎಲ್ಲವನ್ನು ಕುಲಗೆಡಿಸಿದ್ದೀರಾ, ದೇವಾಲಯಗಳ ನಿರ್ಮಾಣಕ್ಕೆ ಮರಗಳನ್ನು ಬಳಸಿಕೊಳ್ಳಬಹುದು. ಹಳೆಯ ರಸ್ತೆಗಳಿದ್ದರೆ ತಡೆಯೊಡ್ಡ ಬಾರದೆಂದು ಇದೆ. ದೇವರಕಾಡು ನಿರ್ವಹಣೆ ಮಾಡುವದು ಮಾತ್ರ ಇಲಾಖೆಯ ಕರ್ತವ್ಯವೆಂದು ಹೇಳಿದರು. ನಿಮ್ಮ ಕಾರ್ಯವೈಖರಿ ನೋಡಿದರೆ, ಕೊಡಗಿನವರು ಕಾಡು ಬೆಳಸಿದ್ದೇ ತಪ್ಪು ಎಂದಾಗುತ್ತಿದೆ. ಯಾವದೇ ಕಾರಣಕ್ಕೂ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡಬೇಡಿ ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗಾಳಿಬೀಡು ಗ್ರಾ.ಪಂ.ಅಧ್ಯಕ್ಷ ಸುಭಾಷ್ ಸೋಮಯ್ಯ ಅವರು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಮರ ತೆರವುಗೊಳಿಸಲು ಬಿಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಮಡಿಕೇರಿ ತಾಲೂಕಿನ ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ಮಶಾನ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಜಾಗ ಕಾಯ್ದಿರಿಸು ವಂತೆ ಪತ್ರ ಬರೆಯಲಾಗಿತ್ತು, ಆದರೆ ಎಷ್ಟು ಗ್ರಾ.ಪಂ.ಗಳಲ್ಲಿ ಈ ಕಾರ್ಯ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ತಹಶೀಲ್ದಾರರಿಗೆ ಕೆ.ಜಿ.ಬೋಪಯ್ಯ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷೆÀ ರೀಟಾ ಮುತ್ತಣ್ಣ ಅವರು ತಮ್ಮ ಗ್ರಾ.ಪಂ.ನಲ್ಲಿ ಜಾಗ ಕಾಯ್ದಿರಿಸಲಾಗಿದೆ. ಆದರೆ ಇದುವರೆಗೆ ಆರ್‍ಟಿಸಿ ಆಗಿಲ್ಲ ಎಂದು ನುಡಿದರು. ಘನ ತ್ಯಾಜ್ಯ ವಿಲೇವಾರಿ ಹಾಗೂ ಸ್ಮಶಾನಕ್ಕೆ ಭೂಮಿ ಕಾಯ್ದಿರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಹಶೀಲ್ದಾರ್ ಮಹೇಶ್ ಮಾಹಿತಿ ನೀಡಿದರು. ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ ನವಗ್ರಾಮ ಯೋಜನೆಯಡಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕು, ಅಡಿಕೆ ಮತ್ತು ರಬ್ಬರ್ ಬೆಳೆ ಅತಿವೃಷ್ಟಿಯಿಂದ ಹಾನಿಯಾಗಿದ್ದು, ಈ ಬೆಳೆಗೂ ಸಹ ಪರಿಹಾರ ದೊರೆಯಬೇಕು ಎಂದು ಅವರು ಮನವಿ ಮಾಡಿದರು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರರಿಗೆ ಶಾಸಕರು ಸೂಚಿಸಿದರು.

ಮಡಿಕೇರಿ ತಾಲೂಕಿನಲ್ಲಿ ಶಾಲೆಗಳ ದಾಖಲಾತಿ ಸಂಬಂಧ ಮಾಹಿತಿ ಪಡೆದ ಶಾಸಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯ ಹೆಸರಿಗೆ ಆರ್‍ಟಿಸಿ ಮಾಡಿಸಿಕೊಳ್ಳಲು ಹೆಚ್ಚಿನ ಕಾಳಜಿವಹಿಸುವಂತೆ ಕೆ.ಜಿ.ಬೋಪಯ್ಯ ಅವರು ನಿರ್ದೇಶನ ನೀಡಿದರು. ಶಾಲೆಗೆ ನೀಡಿರುವ ಜಾಗ ಒತ್ತುವರಿಯಾಗಿದ್ದಲ್ಲಿ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅತಿವೃಷ್ಟಿ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಡಬೇಕು. ಕೃಷಿ, ತೋಟಗಾರಿಕೆ, ಕಾಫಿ, ಕರಿಮೆಣಸು, ಬಾಳೆ ಅಡಿಕೆ, ರಬ್ಬರ್ ಮತ್ತಿತರ ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ಹಾಗೂ ಸಹಾಯಧನವನ್ನು ಸಕಾಲದಲ್ಲಿ ತಲಪಿಸುವಂತೆ ಶಾಸಕರಾದ ಬೋಪಯ್ಯ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲೋಕೋಪಯೋಗಿ, ಪಂಚಾಯತ್ ರಾಜ್, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸಣ್ಣ ನೀರಾವರಿ ಇಲಾಖಾ ವ್ಯಾಪ್ತಿಯ ರಸ್ತೆ, ಸೇತುವೆ, ತಡೆಗೋಡೆ ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು. ವೀಣಾ ಅಚ್ಚಯ್ಯ ಅವರು ಮಾತನಾಡಿ ಸೋಮವಾರ ಮತ್ತು ಶುಕ್ರವಾರ ತಾಲೂಕು ಕಚೇರಿಯಲ್ಲಿ ತಹಶೀಲ್ದಾರರು ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿದ್ದು, ಜನರಿಗೆ ಸ್ಪಂದಿಸುವಂತೆ ಸೂಚಿಸಿದರು.

ತಾ.ಪಂ.ಇಒ ಲಕ್ಷ್ಮೀ ಅವರು ಉದ್ಯೋಗ ಖಾತರಿ ಯೋಜನೆಯಡಿ ಶೇ.90 ರಷ್ಟು ಪ್ರಗತಿ ಸಾಧಿಸಲಾಗಿದೆ. ವಸತಿ ಯೋಜನೆಯಡಿ 17 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಪುನರ್ ವಸತಿ ಸಂಬಂಧಿಸಿದಂತೆ 488 ಮನೆಗಳ ನಿರ್ಮಾಣ ಮಾಡಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್, ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭ ಮೋಹನ್, ಉಪಾಧ್ಯಕ್ಷ ಸುಬ್ರಮಣಿ ಸ್ಥಾಯಿ ಸಮಿತಿ ಅಧ್ಯಕ್ಷ ಗಣಪತಿ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿ ಗಮನ ಸೆಳೆದರು. ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಎಂಜಿನಿಯರ್ ಗುಂಡಪ್ಪ, ಕಾರ್ಮಿಕ ಅಧಿಕಾರಿ ಯತ್ನಟ್ಟಿ, ತಾ.ಪಂ.ಸದಸ್ಯರಾದ ಉಮಾಪ್ರಭು, ತಾ.ಪಂ.ಉಪಾಧ್ಯಕ್ಷರಾದ ಸುಬ್ರಮಣಿ ಅವರು ಹಲವು ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಅಕ್ಷರ ದಾಸೋಹ, ಪಶುಪಾಲನೆ, ಮೀನುಗಾರಿಕೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಸಾಮಾಜಿಕ ಅರಣ್ಯ, ಸಣ್ಣ ನೀರಾವರಿ, ಆಹಾರ ಮತ್ತು ನಾಗರಿಕ ಪೂರೈಕೆ, ಕಾರ್ಮಿಕ ಹೀಗೆ ನಾನಾ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ.ಸದಸ್ಯರಾದ ಯಲದಾಳು ಪದ್ಮಾವತಿ, ಕಲಾವತಿ ಪೂವಪ್ಪ, ತಾ.ಪಂ.ಸದಸ್ಯರು, ಗ್ರಾ.ಪಂ.ಅಧ್ಯಕ್ಷರು ಇತರರು ಇದ್ದರು.