ಮಡಿಕೇರಿ, ಸೆ. 19: ವಿಪತ್ತು ಸಂಭವಿಸುವದಕ್ಕೂ ಮೊದಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಹಾಗೆಯೇ ಹವಾಮಾನ ವರದಿ, ಮಳೆಯ ಪ್ರಮಾಣ ಮತ್ತಿತರ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿ ನೀಡಿದಾಗ ವಿಪತ್ತನ್ನು ಸಮರ್ಥವಾಗಿ ನಿಬಾಯಿಸ ಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪೆನ್ನೇಕರ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮೈಸೂರು ಆಡಳಿತ ತರಬೇತಿ ಸಂಸ್ಥೆ, ಕೊಡಗು ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ‘ವಿಕೋಪ ನಿರ್ವಹಣೆ ಯಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಕೋಪ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಮಾಧ್ಯಮದವರು ಸಮನ್ವಯತೆಯಿಂದ ಕಾರ್ಯನಿರ್ವ ಹಿಸಿದ್ದಲ್ಲಿ ಸಾಕಷ್ಟು ರಕ್ಷಣಾ ಕಾರ್ಯ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.

ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಅಧಿಕಾರಿಗಳು ಮತ್ತು ಮಾಧ್ಯಮದವರು ಮಾನವೀಯತೆಯನ್ನು ರೂಢಿಸಿ ಕೊಂಡು ಕಾರ್ಯನಿರ್ವಹಿಸಿದ್ದಲ್ಲಿ ಹಲವು ಸವಾಲುಗಳನ್ನು ಪರಿಹರಿಸ ಬಹುದಾಗಿದೆ ಎಂದರು.

ವಾಸ್ತವ ನೆಲೆಗಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯನಿರ್ವಹಿ ಸಬೇಕಿದೆ. ಮಾಧ್ಯಮದವರು ಮತ್ತು ಅಧಿಕಾರಿಗಳು ಸಮನ್ವಯತೆಯಿಂದ ಮತ್ತು ಶ್ರದ್ಧೆಯಿಂದ ಕಾರ್ಯ ನಿರ್ವಹಿಸಿದಾಗ ವಿಕೋಪವನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ನುಡಿದರು.

ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮಾಧ್ಯಮಗಳು ಬೆಳಕು ಚೆಲ್ಲಿದರ ಪರಿಣಾಮ ಹೆಚ್ಚಿನ ಕೆಲಸಗಳು ಆಗಲು ಸಾಧ್ಯವಾಯಿತು ಎಂಬದನ್ನು ಮರೆಯುವಂತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ನಿರ್ದೇಶಕ ಡಾ. ಎಂ. ದಿಲೀಪ್‍ಕುಮಾರ್ ಮಾತನಾಡಿ, ವಿಕೋಪ ಸಂದರ್ಭದಲ್ಲಿ ಬಡವರು, ಮಹಿಳೆಯರು, ಮಕ್ಕಳು ಹೆಚ್ಚಾಗಿ ವಿಕೋಪಕ್ಕೆ ತುತ್ತಾಗುತ್ತಾರೆ. ಈ ಸಂದರ್ಭದಲ್ಲಿ ಇವರ ರಕ್ಷಣೆ ಅತ್ಯಂತ ಅಗತ್ಯ. ಮಾಧ್ಯಮ ಮತ್ತು ಅಧಿಕಾರಿಗಳ ನಡುವೆ ಸಮನ್ವಯತೆ ಸಾಧಿಸಿ ನಿರ್ಗತಿಕರ ರಕ್ಷಣೆ ಮಾಡುವಂತಾಗ ಬೇಕು ಎಂದರು.

ಪ್ರಕೃತಿ ವಿಕೋಪ ಸಂಬಂಧಿಸಿದಂತೆ ಕೆಲವು ವಿಚಾರಗಳು ಮಾಧ್ಯಮಗಳ ಮೂಲಕ ಮಾಹಿತಿ ದೊರೆಯುತ್ತವೆ. ಒಂದಕ್ಕೊಂದು ಕೊಂಡಿಯಿದ್ದು, ಸೇತುವೆಯಂತೆ ಕಾರ್ಯನಿರ್ವಹಿಸಬೇಕಿದೆ ಎಂದರು.

ಪ್ರಜಾವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಎ. ಆದಿತ್ಯ, ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಅಭಿಪ್ರಾಯ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಮಾತನಾಡಿದರು.

ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ. ರಾಧ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಉಪ ಪರಿಸರ ಅಧಿಕಾರಿ ಸುಧಾ, ಪತ್ರಕರ್ತರಾದ ಸುನಿಲ್ ಪೊನ್ನಟ್ಟಿ, ರಾಕೇಶ್, ಮಂಜು, ಲಕ್ಷ್ಮೀಶ್ ಇತರರು ಇದ್ದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿದರು.