ಕುಶಾಲನಗರ, ಸೆ. 19: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಎಪಿಸಿಎಂಎಸ್) ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಎಂ. ಪ್ರಸನ್ನ ಅಧ್ಯಕ್ಷತೆಯಲ್ಲಿ ನಡೆಯಿತು.

ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆದ ಮಹಾಸಭೆಯಲ್ಲಿ ಚರ್ಚೆ ನಡೆದು ಒಟ್ಟು 12 ನಿರ್ದೇಶಕರ ಆಡಳಿತ ಮಂಡಳಿಯ ಸಹಕಾರ ಸಂಘಕ್ಕೆ ಕುಶಾಲನಗರ ಭಾಗದಿಂದ ಪ್ರಸಕ್ತ ಇರುವ 4 ನಿರ್ದೇಶಕರ ಸ್ಥಾನದ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಸ್ಥಾನವನ್ನು ಮಹಾ ಸಭೆಯಲ್ಲಿ ಮಂಜೂರು ಮಾಡ ಬೇಕೆಂದು ಕುಶಾಲನಗರ, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯ ರೈತ ಸದಸ್ಯರು ಸಭೆಯಲ್ಲಿ ಒತ್ತಾಯ ಕೇಳಿಬಂತು.

ಈ ಪ್ರಸ್ತಾವನೆಗೆ ಸುಂಟಿಕೊಪ್ಪ ಹಾಗೂ ನಂಜರಾಯಪಟ್ಟಣ ವ್ಯಾಪ್ತಿಯ ರೈತ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸುದೀರ್ಘ ಚರ್ಚೆಯ ನಂತರ ಕುಶಾಲನಗರ ಹಾಗೂ ಮುಳ್ಳುಸೋಗೆ ಗ್ರಾಮಗಳನ್ನು ನಂಜರಾಯಪಟ್ಟಣ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಭರವಸೆಯನ್ನು ಅಧ್ಯಕ್ಷರು ನೀಡಿದರು.

ಸಂಘದಿಂದ ಕಲ್ಯಾಣ ಮಂಟಪದ ಆವರಣದಲ್ಲಿ ನಿರ್ಮಿಸಿರುವ ಭೋಜನ ಕೊಠಡಿ ನಿರ್ಮಾಣಕ್ಕೆ ಈಗಾಗಲೇ 33 ಲಕ್ಷ ರೂಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸಿದ್ದರೂ ಕೂಡ ಹೆಚ್ಚುವರಿಯಾಗಿ ಮತ್ತೆ 10 ಲಕ್ಷ ರೂ.ಗಳನ್ನು ಪಡೆದಿರುವದನ್ನು ಸದಸ್ಯ ಶಶಿಧರ್ ಪ್ರಶ್ನಿಸಿ ಆಡಳಿತ ಮಂಡಳಿ ಸದಸ್ಯರ ನಡುವೆ ವಿಶ್ವಾಸಾರ್ಹತೆ ಕಾಪಾಡಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕೆ.ಎಂ. ಪ್ರಸನ್ನ ಮಾತನಾಡಿ, ಸಂಘದಲ್ಲಿ 1526 ಸದಸ್ಯರಿದ್ದು ಎಲ್ಲರೂ ಸಂಘದಲ್ಲಿ ವ್ಯವಹರಿಸುವ ಮೂಲಕ ಸಂಘದ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕು. ಸಂಘದ ಬ್ಯಾಂಕಿನಲ್ಲಿ ಖಾತೆಯನ್ನು ತೆರೆಯಬೇಕೆಂದು ಮನವಿ ಮಾಡಿದರು. ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 60 ಲಕ್ಷಗಳ ವ್ಯಾಪಾರ ಲಾಭ ಗಳಿಸಿ, ರೂ. 39 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.25. ಡಿವಿಡೆಂಡ್ ವಿತರಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಪಾರ್ವತಿ ಮಾಹಿತಿ ಒದಗಿಸಿದರು. ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಸಹಕಾರಿ ಎಂ.ಎನ್. ಕುಮಾರಪ್ಪ ಅವರನ್ನು ಮಹಾಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಕೃಷ್ಣರಾಜು ಸ್ವಾಗತಿಸಿ, ಜಗದೀಶ್ ವಂದಿಸಿದರು.

ನಿರ್ದೇಶಕರಾದ ಎ.ಪಿ. ನೀಲಮ್ಮ, ಬಿ. ಸರೋಜ, ಸೋಮಯ್ಯ, ಟಿ.ಕೆ. ರಘು, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಉಷಾ ತೇಜಸ್ವಿ ಇದ್ದರು.