ಕೂಡಿಗೆ, ಸೆ. 19: ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡು ರೂ. 20.10 ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್ ತಿಳಿಸಿದ್ದಾರೆ.

ಸಂಘವು ಬೆಳವಣಿಗೆಗೆ ಹಾಗೂ ಕಳೆದ ವಾರ್ಷಿಕ ಸಭೆಯಲ್ಲಿ ಕೈಗೊಂಡ ತೀರ್ಮಾನಗಳನ್ನು ಅನುಷ್ಠಾನಗೊಳಿಸುವದರ ಮೂಲಕ ರೈತರ ಪ್ರಗತಿಗೆ ಸಹಕಾರಿಯಾಗಿದೆ. 3632 ಸದಸ್ಯರನ್ನು ಹೊಂದಿದ್ದು, ಠೇವಣಿ ಹಣ ರೂ. 929.83 ಲಕ್ಷ ಇದೆ. ಸದಸ್ಯರಿಗೆ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ರೈತರಿಗೆ ಕೆಸಿಸಿ ಸಾಲ ರೂ. 543.29 ಲಕ್ಷ, ಜಾಮೀನು ಸಾಲ ರೂ. 3.95 ಲಕ್ಷ, ನಿರಖು ಠೇವಣಿ ರೂ. 8.35 ಲಕ್ಷ, ಸ್ವಸಹಾಯ ಗುಂಪು ರೂ. 14.87 ಲಕ್ಷ, ಭವಿಷ್ಯನಿಧಿ ಸಾಲ ರೂ. 8.07 ಲಕ್ಷ, ಆಭರಣ ಸಾಲ ರೂ. 210.38 ಲಕ್ಷ, ವ್ಯಾಪಾರಾಭಿವೃದ್ಧಿ ಸಾಲ ರೂ. 96.95 ಲಕ್ಷ, ಕೃಷಿ ಟ್ರ್ಯಾಕ್ಟರ್ ಸಾಲ ರೂ. 15.20 ಲಕ್ಷ, ಜಂಟಿ ಗುಂಪು ಸಾಲ ರೂ. 5.52 ಲಕ್ಷ, ಪಿಗ್ಮಿ ಸಾಮಾನ್ಯ ಸಾಲ ರೂ. 402.96, ಆಸಾಮಿ ಸಾಲ ರೂ. 3.53 ಲಕ್ಷ ಹಣವನ್ನು ನೀಡಲಾಗಿದ್ದು, 2019-20ನೇ ಸಾಲಿನಲ್ಲಿ ರೂ. 20.10 ಲಕ್ಷ ಲಾಭವನ್ನು ಸಂಘ ಗಳಿಸಿದೆ ಎಂದು ಹೇಳಿಕೆ ನೀಡಿದ್ದಾರೆ.

2019-20ನೇ ವಾರ್ಷಿಕ ಮಹಾಸಭೆ ತಾ. 22 ರಂದು ಸಂಘದ ರೈತ ಸಹಕಾರ ಭವನದಲ್ಲಿ ನಡೆಯಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮೀನಾ ತಿಳಿಸಿದ್ದಾರೆ.