*ಗೋಣಿಕೊಪ್ಪಲು, ಸೆ. 19 : ವ್ಯಾಪಾರಿ ಹಾಗೂ ಗ್ರಾಹಕರ ನಡುವೆ ಚಪ್ಪಲಿ ಅಂಗಡಿಯಲ್ಲಿ ನಡೆದ ಮಾತಿನ ಚಕಮಕಿಯೊಂದು ಅತಿರೇಕಕ್ಕೆ ಹೋಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಇಬ್ಬರ ನಡುವೆ ಮಾರಾಮಾರಿಯಾದ ಘಟನೆ ನಡೆದಿದೆ.

ಇಂದು ಬೆಳಿಗ್ಗೆ 8:45ರ ಸಮಯದಲ್ಲಿ ಇಲ್ಲಿನ ಪಟ್ಟಣದ ಮುಖ್ಯ ರಸ್ತೆಯ ಬದಿ ಪಂಚಾಯಿತಿ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ ಈ ಘಟನೆ ಸಂಭವಿಸಿದೆ.

ಹೀರಣ್ಣ ಕಾಲೋನಿ ನಿವಾಸಿ ಮೈಕಲ್ ದಾಸ್ ಹಾಗೂ ಸ್ಥಳೀಯ ನಿವಾಸಿ ಮುಜುಮ್ಮಿಲ್ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರ ತಲೆಗೂ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ. ಸ್ಥಳೀಯ ಪೆÇಲೀಸರು ಇಬ್ಬರ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರವೇಶಿಸಿದ ಸ್ಥಳೀಯ ನಿವಾಸಿಗಳಾದ ರಾಜೇಶ್, ಮಂಜು ಮತ್ತು ಪ್ರಜೇಶ್ ಮೇಲೆಯೂ ಪ್ರಕರಣ ದಾಖಲಾಗಿದೆ

ಘಟನೆ ವಿವರ: ಬುಧವಾರ ಸಂಜೆ ಪಟ್ಟಣದಲ್ಲಿ ಮುಜುಮಿಲ್ ವ್ಯಾಪಾರ ನಡೆಸುತ್ತಿರುವ ಉಪಾಹಾರ್ ಚಪ್ಪಲಿ ಅಂಗಡಿಯಲ್ಲಿ ತನ್ನ ಮಗಳಿಗೆ ಚಪ್ಪಲಿ ಖರೀದಿಸಲು ಮೈಕಲ್ ದಾಸ್ ತನ್ನ ಪತ್ನಿ ಹಾಗೂ ಮಗಳೊಂದಿಗೆ ತೆರಳಿದ್ದರು. ಚಪ್ಪಲಿ ಖರೀದಿಸುವ ಸಂಬಂಧ ಚಪ್ಪಲಿ ಬೆಲೆ 299 ಇದ್ದುದ್ದನ್ನು 250 ರೂಪಾಯಿ ದರದಲ್ಲಿ ನೀಡುವಂತೆ ಕೇಳಲಾಗಿತ್ತು. ಆದರೆ ಮುಜುಮಿಲ್‍ನ ಚಪ್ಪಲಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಮೀರ್ ಚಪ್ಪಲಿಯ ಬೆಲೆಯನ್ನು ಕಡಿಮೆಗೊಳಿಸಲು ಒಪ್ಪಲಿಲ್ಲ. ಇದಕ್ಕೆ ಕೆಲ ಸಮಯ ಜಮೀರ್ ಹಾಗೂ ಮೈಕಲ್ ದಾಸ್ ನಡುವೆ ಮಾತಿನ ಚಕಮಕಿ ನಡೆದು ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿತ್ತು. ಆದರೂ ಘಟನೆ ಸದ್ಯದ ಮಟ್ಟಿಗೆ ತಿಳಿಗೊಂಡಿತ್ತು. ಮರುದಿನ ಬೆಳಿಗ್ಗೆ ಈ ಘಟನೆಯನ್ನು ಆದರಿಸಿ ಮೈಕಲ್ ದಾಸ್ ತನ್ನ ಕಾರಿನಲ್ಲಿ ಪಟ್ಟಣದ ಮುಖ್ಯ ಬೀದಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಮೀರ್ ಹಾಗೂ ಮುಜುಮಿಲ್ ಅಡ್ಡ ತಡೆದು ಮೈಕಲ್ ದಾಸ್‍ನ ಮೇಲೆ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಘಟನೆ ವಿಕೋಪಕ್ಕೆ ತೆರಳಿ ಮುಜುಮಿಲ್ ಹಾಗೂ ಮೈಕಲ್ ದಾಸ್ ಹೊಡೆದಾಡಿಕೊಂಡಿದ್ದಾರೆ. ಈ ಸಂದರ್ಭ ಕೆಲವರು ಮಧ್ಯಪ್ರವೇಶಿಸಿ ಮುಜುಮಿಲ್ ಮೇಲೆ ಹಲ್ಲೆ ನಡೆಸಿದ್ದಾರೆ. ವೃತ್ತ ನಿರೀಕ್ಷಕ ದಿವಾಕರ್, ಉಪನಿರೀಕ್ಷಕ ಮಂಚಯ್ಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.