ವಾಲ್ನೂರು, ಸೆ. 19: ಕುಶಾಲನಗರ ಹೋಬಳಿಯ ವಾಲ್ನೂರು-ತ್ಯಾಗತ್ತೂರು ಗ್ರಾಮದ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ವಾರ್ಷಿಕ ಮಹಾಸಭೆ ಅಧ್ಯಕ್ಷ ಎ.ವಿ. ಶಾಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ ಇರುವ ಒಟ್ಟು 108 ದವಸ ಭಂಡಾರಗಳ ಪೈಕಿ ವಾಲ್ನೂರಿನ ಸಹಕಾರ ದವಸ ಭಂಡಾರ ಪ್ರಸಕ್ತ ಸಾಲಿನಲ್ಲಿ ಮಾಡಿರುವ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಂದ ಪ್ರಥಮ ಬಹುಮಾನಗಳಿಸಿದೆ. ತಾ. 24 ರಂದು ಮಡಿಕೇರಿಯಲ್ಲಿ ನಡೆಯಲಿರುವ ಜಿಲ್ಲಾ ಕೇಂದ್ರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ದವಸ ಭಂಡಾರಕ್ಕೆ ಬಹುಮಾನ ನೀಡಲಾಗುತ್ತಿದೆ. 180 ಸದಸ್ಯರನ್ನು ಹೊಂದಿರುವ ದವಸ ಭಂಡಾರವು ಈ ಸಾಲಿನಲ್ಲಿ ರೂ. 1.75 ಲಕ್ಷಗಳ ಲಾಭಗಳಿಸಿದೆ. ಸದಸ್ಯರಿಗೆ ಶೇ. 15 ಡಿವಿಡೆಂಡ್ ನೀಡಲಾಗುವದು ಎಂದು ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.

ಸಹಕಾರ ದವಸ ಭಂಡಾರದ ಉಪಾಧ್ಯಕ್ಷ ಜಿ.ಎನ್. ರಾಮಪ್ಪ, ನಿರ್ದೇಶಕರಾದ ಮಹೇಶ್ ಚಂದ್ರ, ಮಾದಪ್ಪ, ರಾಮಪ್ಪ, ಕೃಷ್ಣಪ್ಪ, ಸುರೇಶ್, ದರ್ಶನ್, ಕಮಲಮ್ಮ ಹಾಗು ಸಂಘದ ಕಾರ್ಯದರ್ಶಿ ಶಿವಕುಮಾರ್ ಇದ್ದರು.

ಸಿಬ್ಬಂದಿ ಚೈತನ್ಯ ಪ್ರಾರ್ಥಿಸಿ, ಮಹೇಶ್ ಚಂದ್ರ ಸ್ವಾಗತಿಸಿದರು. ರಾಮಪ್ಪ ವಂದಿಸಿದರು.