ಸೋಮವಾರಪೇಟೆ, ಸೆ. 19: ಧಾರ್ಮಿಕ ಆಚರಣೆಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್ ಅಭಿಪ್ರಾಯಿಸಿದರು.

ಸಮೀಪದ ಆಲೆಕಟ್ಟೆ ಭಾರತೀಯ ಯುವಕ ಸಂಘದಿಂದ ಪ್ರತಿಷ್ಠಾಪಿಸ ಲಾಗಿದ್ದ ಗೌರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇವತಾ ಕಾರ್ಯಗಳ ಜತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿ ಕೊಂಡಿರುವ ಭಾರತೀಯ ಯುವಕ ಸಂಘದ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದರು. ಕಳೆದ ವರ್ಷದಂತೆ ಈ ಸಾಲಿನಲ್ಲಿಯೂ ಕೂಡ ತಮ್ಮ ಜಿ.ಪಂ. ಅನುದಾನದಲ್ಲಿ ಸಂಘಕ್ಕೆ ಅಗತ್ಯವಿರುವ ಕಟ್ಟಡ ಕಾಮಗಾರಿಗೆ ನೆರವು ನೀಡುವದಾಗಿ ಹೇಳಿದರು.

ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ಮಾತನಾಡಿ, ಸಾರ್ವಜನಿಕರಿಗೆ ಅಗತ್ಯವಿರುವ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ನೆರವು ನೀಡುವದಾಗಿ ಭರವಸೆಯಿತ್ತರು.

ಈ ಸಂದರ್ಭ ಮಾಜಿ ಯೋಧ ಅಶೋಕ್, ಮುಖ್ಯ ಶಿಕ್ಷಕಿ ಶಶಿಕಲಾ, ಸಮಾಜ ಸೇವಕಿ ಪುಷ್ಪಾ ರೈ, ಜಿ.ಪಂ. ಸದಸ್ಯೆ ಪೂರ್ಣಿಮ ಗೋಪಾಲ್, ತಾ.ಪಂ. ಸದಸ್ಯೆ ತಂಗಮ್ಮ, ಮಾಜಿ ಅಧ್ಯಕ್ಷ ಉದಯ್‍ಸಿಂಗ್, ಗ್ರಾ.ಪಂ. ಸದಸ್ಯೆ ಮಂಜುಳ ಸುಬ್ರಮಣಿ, ಉದ್ಯಮಿ ಮುರಳೀಧರ್ ಅವರುಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಅಲ್ಲದೇ ಸಂಘದ ಕಾರ್ಯಕ್ರಮಗಳಿಗೆ ನೆರವು ನೀಡಿದ ಹಲವಾರು ದಾನಿಗಳನ್ನು ಈ ಸಂದರ್ಭ ಅಭಿನಂದಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಮನುಕುಮಾರ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಮಾಜಿ ಅಧ್ಯಕ್ಷ ಶ್ರೀಕಾಂತ್ ನಿರೂಪಿಸಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ಯುವಕ ಸಂಘದ ಅಧ್ಯಕ್ಷ ಮಂಜುನಾಥ್, ಚೌಡ್ಲು ಗ್ರಾ.ಪಂ. ಅಧ್ಯಕ್ಷೆ ರಮ್ಯ ಕರುಣಾಕರ್, ಸದಸ್ಯರುಗಳಾದ ಧರ್ಮ, ನರಸಿಂಹ ಇದ್ದರು. ಸದಸ್ಯರುಗಳಾದ ಶಶಿಕುಮಾರ್ ಸ್ವಾಗತಿಸಿ, ಜನಾರ್ಧನ್ ಪ್ರಾರ್ಥಿಸಿದರೆ, ಗಂಗಾಧರ್ ವಂದಿಸಿದರು.