ನಾಪೋಕ್ಲು, ಸೆ. 19: ಈ ವರ್ಷ ಸುರಿದ ಮಹಾಮಳೆ ಮನೆಮಠಗಳನ್ನು ಆಸ್ತಿಪಾಸ್ತಿಗಳನ್ನು ಅಪೋಷನ ಪಡೆದಿರುವದು ಒಂದೆಡೆಯಾದರೇ, ಮತ್ತೊಂದೆಡೆ ಕಾಫಿ ಬೆಳೆಗಾರರ ಬದುಕನ್ನೇ ಅತಂತ್ರವನ್ನಾಗಿಸಿದೆ. ನಾಪೋಕ್ಲುವಿನ ನಾಲ್ಕುನಾಡಿನಲ್ಲಿ ಅತಿವೃಷ್ಟಿಯಿಂದಾಗಿ ಕಾಫಿಬೆಳೆ ಬಹುತೇಕ ಕೊಳೆತುಹೋಗಿದ್ದು, ಕಾಫಿಬೆಳೆಗಾರರು ಕಂಗಾಲಾಗಿದ್ದಾರೆ.

ನಾಲ್ಕುನಾಡು ವ್ಯಾಪ್ತಿಯ ಕಕ್ಕಬ್ಬೆ, ಯುವಕಪಾಡಿ, ನಾಲಡಿ, ಕೋಕೇರಿ, ಪೇರೂರು, ಬಲ್ಲಮÁವಟ್ಟಿ ಮುಂತಾದ ಕಡೆಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕಾಫಿ ಬೆಳೆಗೆ ನಷ್ಟ ಬಾಧಿಸಿದೆ.

ಹೆಚ್ಚುತ್ತಿರುವ ಕಾರ್ಮಿಕರ ವೇತನ, ದುಬಾರಿ ನಿರ್ವಹಣೆಯ ನಡುವೆ ವರ್ಷಪೂರ್ತಿ ಕಷ್ಟಪಟ್ಟು ದುಡಿದರೂ ಮೊದಲೇ ಕೈಗೆಟುಕದ ಬೆಲೆಯ ನಡುವೆ ಹೈರಾಣಾಗಿದ್ದ ಕಾಫಿ ಬೆಳೆಗಾರ ಪ್ರಸಕ್ತ ಸಾಲಿನಲ್ಲಿ ಸುರಿಯುತ್ತಿರುವ ಮಳೆಯ ಹೊಡೆತ ಕಾಫಿ ಬೆಳೆಗಾರನಿಗೆ ‘ಗಾಯದ ಮೇಲೆ ಬರೆ ಎಳೆದಂತಾಗಿದೆ’.

ಮೊದಲೇ ಕಾಫಿ ತೋಟಗಳಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಹೆಚ್ಚಿನ ಸಂಬಳ ನೀಡಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಕಾರ್ಮಿಕರನ್ನು ಅವಲಂಭಿಸ ಬೇಕಾಗಿದೆ. ಈ ನಡುವೆ ಗೊಬ್ಬರ, ಕ್ರಿಮಿನಾಶಕ ಮುಂತಾದವುಗಳ ಬೆಲೆ ಏರಿಕೆಯೊಂದಿಗೆ ಕಾಫಿ ತೋಟಗಳ ನಿರ್ವಹಣೆ ದುಬಾರಿಯಾಗಿದೆ.

ಈ ಹಿನ್ನೆಲೆ ಕಾಫಿ ತೋಟಗಳ ನಿರ್ವಹಣೆಯಿಂದ ಕಂಗೆಟ್ಟಿದ್ದ ಕಾಫಿ ಬೆಳೆಗಾರರ ಮೇಲೆ ವರುಣ ಮುನಿಸು ತೋರಿದ್ದು, ಧಾರಾಕಾರ ಮಳೆಯಿಂದಾಗಿ ನಾಲ್ಕುನಾಡು ವ್ಯಾಪ್ತಿಯಲ್ಲಿ ಕಾಫಿ ಬೆಳೆ ಸಂಪೂರ್ಣ ನೆಲಕಚ್ಚಿದೆ.

ನದಿದಡದಲ್ಲಿದ್ದ ಕಾಫಿ ತೋಟಗಳು ಸಂಪೂರ್ಣ ಮುಳುಗಡೆಯಾಗಿ ಬೆಳೆಗಾರನಿಗೆ ಏನೂ ಸಿಗದಂತಾಗಿದ್ದರೆ, ಗಾಳಿ ಮಳೆಯಿಂದಾಗಿ ಕಾಫಿ ಗಿಡಗಳಲ್ಲಿ ಕಾಫಿ ಹೋಗಲಿ ಗಿಡದಲ್ಲಿ ಎಲೆಗಳು ಸಹಾ ಇಲ್ಲದಂತಾಗಿದೆ. ಕಾಫಿಬೆಳೆಯ ಜೊತೆಗೆ ಉಪ ಬೆಳೆಗಳಾದ ಅಡಿಕೆ ಹಾಗೂ ಕರಿಮೆಣಸು ಸಹಾ ಮಳೆಯ ಆರ್ಭಟಕ್ಕೆ ಮಣ್ಣುಪಾಲಾಗಿವೆ. ವರ್ಷಪೂರ್ತಿ ಕಾಫಿ ತೋಟದ ನಿರ್ವಹಣೆಯಲ್ಲಿ ತೊಡಗಿದ್ದ ಬೆಳೆಗಾರನಿಗೆ ವರುಣನ ಅಬ್ಬರದಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.

ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಬೆಳೆಗಾರರಿಗೆ ವರುಣ ಆಘಾತವನ್ನೇ ನೀಡಿದ್ದು, ಕಾಫಿ ತೋಟಗಳಲ್ಲಿ ಗಿಡಗಳು ಸಂಪೂರ್ಣ ಕೊಳೆತು ಹೋಗಿರುವದರಿಂದ ಹೊಸದಾಗಿ ಕಾಫಿ ಗಿಡಗಳನ್ನು ನೆಟ್ಟು ಪೋಷಿಸುವಂತಹ ದೀರ್ಘಾವಧಿಯ ಅನಿವಾರ್ಯತೆಯಲ್ಲಿ ಬೆಳೆಗಾರರು ತೊಳಲಾಡುವಂತಾಗಿದೆ.

ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರ ಸಹಾಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗುವ ಮೂಲಕ ಕಾಫಿಗೆ ಬೆಂಬಲ ಬೆಲೆ ಘೋಷಿಸಬೇಕು ಹಾಗೂ ವರ್ಷಂಪ್ರತಿ ನೂರು ಕೋಟಿಯಷ್ಟು ಅನುದಾನವನ್ನು ಕಾಫಿ ಬೆಳೆಗಾರರಿಗೆ ಬಿಡುಗಡೆಗೊಳಿಸು ವಂತಾಗಬೇಕೆಂಬದು ಕಾಫಿ ಬೆಳೆಗಾರರ ಆಗ್ರಹ ಪೂರ್ವಕ ಮನವಿಯಾಗಿದ್ದು, ಇಲ್ಲದಿದ್ದಲ್ಲಿ ಕಾಫಿ ಬೆಳೆಗಾರ ಬದುಕು ಮತ್ತಷ್ಟು ಶೋಚನೀಯ ವಾಗುವದರಲ್ಲಿ ಸಂದೇಹವಿಲ್ಲ.

- ದುಗ್ಗಳ ಸದಾನಂದ