ಗೋಣಿಕೊಪ್ಪ ವರದಿ, ಸೆ. 19: ಮಂಗಳೂರು ವಿಶ್ವ ವಿದ್ಯಾಲಯ, ವೀರಾಜಪೇಟೆ ಕಾವೇರಿ ಕಾಲೇಜು ಸಹಯೋಗದಲ್ಲಿ ಚೆರಿಯಪಂಡ ಕುಶಾಲಪ್ಪ ಜ್ಞಾಪಕಾರ್ಥ ಮಂಗಳೂರು ವಿ.ವಿ. ಅಂತರ್ ಪದವಿ ಕಾಲೇಜು ಪುರುಷರ ಹಾಕಿ ಟೂರ್ನಿ ತಾ. 21 ಮತ್ತು 22 ರಂದು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟ ಸಂಚಾಲಕಿ ಡಾ. ಎಂ.ಎಂ. ದೇಚಮ್ಮ ತಿಳಿಸಿದ್ದಾರೆ.

36 ನೇ ವರ್ಷದ ಈ ಕ್ರೀಡಾಕೂಟದಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯ 14 ಕಾಲೇಜು ತಂಡಗಳು ನೋಂದಾಯಿಸಿಕೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೋಲಿಂಗ್ ಟ್ರೋಫಿಯೊಂದಿಗೆ ಉತ್ತಮ ಆಟಗಾರರಿಗೆ ಬಹುಮಾನ ನೀಡಲಾಗುವದು.

1983 ರಲ್ಲಿ ಕುಶಾಲಪ್ಪ ಅವರ ಪುತ್ರ ಚೆರಿಯಪಂಡ ಪೂವಪ್ಪ ಅವರು ಮಂಗಳೂರು ವಿಶ್ವ ವಿದ್ಯಾಲಯದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ನೀಡಲು ಕ್ರೀಡಾಕೂಟ ಆರಂಭಿಸಿದರು. ಪ್ರಸ್ತುತ ಅವರ ಕುಟುಂಬ ಕ್ರೀಡಾಕೂಟವನ್ನು ಮುನ್ನಡೆಸುತ್ತಿದೆ. ಕ್ರೀಡಾಕೂಟದಲ್ಲಿ ಚೆರಿಯಪಂಡ ಕುಟುಂಬಸ್ಥರು ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಮೆರುಗು ನೀಡಲಿದ್ದಾರೆ ಎಂದರು.

ತಾ. 21 ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆ ನಡೆಯಲಿದೆ. ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಅಜ್ಜಿನಿಕಂಡ ಸಿ. ಗಣಪತಿ, ದಾನಿ ಚೆರಿಯಪಂಡ ಬೇಬಿ ಪೂವಪ್ಪ, ಚೆರಿಯಪಂಡ ಕುಟುಂಬದ ಹಿರಿಯರಾದ ವಿಠಲ, ಕಾಶಿಯಪ್ಪ, ರಾಕೇಶ್ ಪೂವಯ್ಯ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸಿ.ಕೆ. ಕಿಶೋರ್‍ಕುಮಾರ್, ಹಿರಿಯ ಹಾಕಿ ಅಟಗಾರ ಮಂಡೇಡ ಗಿರೀಶ್, ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಕಮಲಾಕ್ಷಿ, ನಿರ್ದೇಶಕ ಕುಲ್ಲಚಂಡ ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.

ತಾ. 22 ರಂದು ಮ. 2 ಗಂಟೆಗೆ ನಡೆಯುವ ಸಮಾರೋಪದಲ್ಲಿ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಚೆರಿಯಪಂಡ ಕೆ. ಉತ್ತಪ್ಪ, ಕೊಡಗು ಮಹಿಳಾ ಹಾಕಿ ಅಸೋಸಿಯೇಷನ್ ಮಾಜಿ ನಿರ್ದೇಶಕಿ ಕೇಳಪಂಡ ಸರಸ್ವತಿ ಅಯ್ಯಪ್ಪ, ಕೂರ್ಗ್ ಪಬ್ಲಿಕ್ ಶಾಲಾ ಆಡಳಿತ ಮಂಡಳಿ ಟ್ರಸ್ಟಿ ಮಾಚಿಮಾಡ ತಿಮ್ಮಯ್ಯ, ಮಾಚಿಮಾಡ ಗೀತಾ ತಿಮ್ಮಯ್ಯ, ಇನ್ಫೋಸಿಸ್ ಮೈಸೂರು ವಲಯ ವ್ಯವಸ್ಥಾಪಕ ಚೆರಿಯಪಂಡ ರೋಶನ್ ಗಣಪತಿ ಉಪಸ್ಥಿತಲಿರುವರು. ಈ ಸಂದರ್ಭ ಒಲಿಂಪಿಯನ್ ಸಣ್ಣುವಂಡ ಕೆ. ಉತ್ತಪ್ಪ ಹಾಗೂ ದಾನಿ ಚೆರಿಯಪಂಡ ರಾಖೇಶ್ ಪೂವಯ್ಯ ಅವರುಗಳನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊ. ಎ. ಎಂ. ಕಮಲಾಕ್ಷಿ, ಕ್ರೀಡಾ ಸಂಚಾಲಕಿ ನಡಿಕೇರಿಯಂಡ ಪ್ರಿಯಾ ಮುದ್ದಪ್ಪ ಉಪಸ್ಥಿತರಿದ್ದರು.