ಮಡಿಕೇರಿ, ಸೆ. 19: ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬ ಆಚರಣೆಗೆ; ಕೊಡಗು ಜಿಲ್ಲಾಧಿಕಾರಿ ಹಾಗೂ ದಸರಾ ಸಮಿತಿ ಅಧ್ಯಕ್ಷರಾಗಿರುವ ಅನೀಸ್ ಕಣ್ಮಣಿ ಜಾಯ್ ಅವರ ನೇತೃತ್ವದಲ್ಲಿ ಈಗಾಗಲೇ ಪೂರ್ವ ಸಿದ್ಧತೆ ಆರಂಭಗೊಂಡಿದೆ. ಮೊನ್ನೆಯಷ್ಟೇ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿರುವ ಅವರು, ನಗರದಲ್ಲಿ ದಸರಾ ಸಂಬಂಧ ತುರ್ತಾಗಿ ಆಗಬೇಕಾಗಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸೂಚಿಸಿದ್ದರು.ಆ ಬೆನ್ನಲ್ಲೇ ಇಂದು ನಗರದ ಸ್ವಚ್ಛತೆಯೊಂದಿಗೆ; ಎಲ್ಲೆಡೆ ವಿದ್ಯುತ್ ದೀಪಗಳನ್ನು ಅಳವಡಿಸುವದು, ಸುಣ್ಣ ಬಣ್ಣ ಬಳಿಯುವ ಕಾಮಗಾರಿಗಳಿಗೆ ಚಾಲನೆ ಲಭಿಸಿದೆ. ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿ, ಕಾಡುಗಳನ್ನು ಕಡಿದು ಜನ ಸಂಚಾರಕ್ಕೆ ಸುಗಮ ವ್ಯವಸ್ಥೆ ರೂಪುಗೊಳ್ಳುತ್ತಿದೆ.ಅಲ್ಲಲ್ಲಿ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚುವ ಕಾಮಗಾರಿಯೂ ಆರಂಭಗೊಂಡಿದೆ. ಈ ಹಿಂದೆ ಒಳಚರಂಡಿ ಕಾಮಗಾರಿಯ ಸಂದರ್ಭ ಹದಗೆಟ್ಟಿರುವ ರಸ್ತೆಗಳನ್ನು ಸಂಬಂಧಪಟ್ಟವರು ತುರ್ತಾಗಿ ಸರಿಪಡಿಸುವ ಕೆಲಸ ಗೋಚರಿಸತೊಡಗಿದೆ. ನಿನ್ನೆಯಿಂದ ಜಿಲ್ಲಾ ಕೇಂದ್ರದಲ್ಲಿ ವರುಣನ ಬಿಡುವು ಲಭಿಸಿರುವ ಬೆನ್ನಲ್ಲೇ; ಜಿಲ್ಲಾಧಿಕಾರಿ ನಿರ್ದೇಶನದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳನ್ನು ಬಳಸಿಕೊಂಡು ತಮಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಗರದ ರಾಜಾಸೀಟ್, ಗಾಂಧಿ ಮೈದಾನ, ವಿವಿಧ ಬಡಾವಣೆ ಉದ್ಯಾನಗಳ ಸಹಿತ ರಸ್ತೆ ಗುಂಡಿಗಳನ್ನು ಮುಚ್ಚಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಕ್ರಮ ವಹಿಸಲಾಗುತ್ತಿದೆ.ಒಟ್ಟಿನಲ್ಲಿ ಮಡಿಕೇರಿ ದಸರಾ ನಾಡಹಬ್ಬದೊಂದಿಗೆ ಪ್ರವಾಸಿಗಳನ್ನು ಆಕರ್ಷಿಸುತ್ತಿರುವ ಜನೋತ್ಸವಕ್ಕೆ ನಗರ ಅಣಿಗೊಳ್ಳತೊಡಗಿದೆ.