ಕೂಡಿಗೆ, ಸೆ. 19: ರೈತರಿಗೆ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಹಾಸನ ಹಾಲು ಒಕ್ಕೂಟ ಹಾಗೂ ರಾಜ್ಯ ಸರ್ಕಾರವು ಹಲವು ಸವಲತ್ತುಗಳನ್ನು ಒದಗಿಸುತ್ತಿದ್ದು, ರೈತರು ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಬೇಕು ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್‍ಕುಮಾರ್ ಹೇಳಿದರು.

ಜೇನುಕಲ್ಲುಬೆಟ್ಟ (ಭುವನಗಿರಿ) ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಸಹಕಾರ ಸಂಘಗಳಿಗೆ ಹಾಲು ಹಾಕುವ ರೈತರಿಗೆ ಸಹಕಾರ ಸಂಘದ ಮುಖೇನ ವಿವಿಧ ರೀತಿಯ ರಿಯಾಯಿತಿ ದರದಲ್ಲಿ ಹಸು ಸಾಕಾಣಿಕೆಗೆ ಸಹಕಾರ ನೀಡಲಾಗುತ್ತಿದೆ.

ಉತ್ತಮ ಪಶು ಆಹಾರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಹಕಾರ ಸಂಘದ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಒಕ್ಕೂಟದ ವತಿಯಿಂದ ಸಹಕಾರ ನೀಡಲಾಗುವದು ಎಂದರು.

ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಟಿ.ಕೆ. ಚಂದ್ರಶೇಖರ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ. ವೀಣಾ, ಒಕ್ಕೂಟದ ನಿವೃತ್ತ ಸಹಾಯಕ ವ್ಯವಸ್ಥಾಪಕ ಹೆಚ್.ಎ. ಪ್ರಕಾಶ್, ಕೂಡಿಗೆ ಗ್ರಾ.ಪಂ. ಉಪಾಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯರಾದ ಟಿ.ಕೆ. ವಿಶ್ವನಾಥ್, ಕೆ.ಜಿ. ಮಂಜಯ್ಯ, ಧನ್ಯಕೃಷ್ಣ ಹಾಗೂ ಸ್ಥಳ ದಾನಿ ಎಂ. ಕೃಷ್ಣಭಟ್ ಹಾಗೂ ಸಂಘದ ನಿರ್ದೇಶಕರು ಸೇರಿದಂತೆ ಕಾರ್ಯದರ್ಶಿ ಹೆಚ್.ಎಂ. ಬಸವರಾಜು ಮತ್ತಿತರರು ಇದ್ದರು.