ಒಡೆಯನಪುರ, ಸೆ. 20: ಕನ್ನಡ ಸಾಹಿತ್ಯ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ಹಾಗೂ ಘಟಕದ ನೂತನ ಸಮಿತಿ ರಚನಾ ಸಭೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಸಮ್ಮುಖದಲ್ಲಿ ಸಮೀಪದ ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಳೆದ ಮೂರೂವರೆ ವರ್ಷಗಳಿಂದ ಕನ್ನಡ, ಸಾಹಿತ್ಯ, ನಾಡು ನುಡಿಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿವರ್ಷವೂ ಜಿಲ್ಲಾ, ತಾಲೂಕು, ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗಿದೆ ಎಂದರು.

ಗ್ರಾಮೀಣ ಜನರಲ್ಲಿ ಸಾಹಿತ್ಯ ಅಭಿರುಚಿ ಬೆಳೆಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿದ್ದು ಮಹಿಳಾ, ಮಕ್ಕಳ ಹಾಗೂ ಯವ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿರುವ ಮೂಲಕ ಜಿಲ್ಲಾ ಕಸಾಪ ರಾಜ್ಯ ಮಟ್ಟದಲ್ಲಿ ಹೆಸರುಗಳಿಸಿದೆ ಎಂದರು. ರಾಜ್ಯ ಮತ್ತು ಜಿಲ್ಲಾ ಕಸಾಪ ನಿರ್ದೇಶನದಂತೆ ಹೋಬಳಿ ಕಸಾಪ ಘಟಕದ ಸಮಿತಿಯ ಅವಧಿ ಮುಗಿದಿರುವ ಹಿನ್ನೆಲೆ ನೂತನ ಸಮಿತಿ ರಚನೆ ಪ್ರಕ್ರಿಯೆ ನಡೆಸುತ್ತಿದ್ದೇವೆ ಎಂದರು. ಕಸಾಪ ಹೋಬಳಿ ಘಟಕ ಕಾರ್ಯಪ್ರವೃತರಾಗುವ ಮೂಲಕ ಕನ್ನಡ ಭಾಷೆ, ಕಲೆ, ಸಂಸ್ಕøತಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ವಿಜೇತ್, ಶನಿವಾರಸಂತೆ ಹೋಬಳಿ ಕಸಾಪ ಘಟಕದ ನಿಕಟಪೂರ್ವ ಅಧ್ಯಕ್ಷ ಚ.ಮಾ. ಪುಟ್ಟಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಘಟಕದ ಕೋಶಾಧಿಕಾರಿ ಡಿ.ಬಿ. ಸೋಮಪ್ಪ, ಕಸಾಪ ಮಾಧ್ಯಮ ಕಾರ್ಯದರ್ಶಿ ಅಶ್ವಥ್, ಕಸಾಪ ಜಿಲ್ಲಾ ಸಮಿತಿ ಸದಸ್ಯೆ ಹೆಚ್.ಬಿ. ಜಯಮ್ಮ, ಜಿಲ್ಲಾ ಸಮಿತಿ ನಿರ್ದೇಶಕ ಹೆಚ್.ಆರ್. ಹರೀಶ್ ಶನಿವಾರಸಂತೆ ಕಸಾಪ ಘಟಕದ ಕಾರ್ಯದರ್ಶಿ ಕೆ.ಪಿ. ಜಯಕುಮಾರ್ ಸಮಿತಿಯ ಸದಸ್ಯರು ಹಾಜರಿದ್ದರು.