ಕೂಡಿಗೆ, ಸೆ. 20: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಕೂಡಿಗೆ ಕ್ರೀಡಾಶಾಲೆ ಮೈದಾನದಲ್ಲಿ ನಡೆಯಿತು.

ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಟಿ. ಕಿರಣ್ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕ್ರೀಡಾಪಟುಗಳು ಸ್ಪರ್ಧಾ ಮನೋಭಾವ ಮೈಗೂಡಿಸಿಕೊಳ್ಳ ಬೇಕಿದೆ. ಜಿಲ್ಲಾಮಟ್ಟದಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಸಾಧನೆ ತೋರಬೇಕಿದೆ ಎಂದರು. ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಬಾಯಿ ವಹಿಸಿದ್ದರು.

ಕೆ.ಆರ್.ಮಂಜುಳಾ, ಕ್ರೀಡಾ ತರಬೇತುದಾರರಾದ ಅಂತೋಣಿ ಡಿಸೋಜ, ವೆಂಕಟೇಶ್ ಸೇರಿದಂತೆ ವಿವಿಧ ಕ್ರೀಡೆಗಳ ತರಬೇತುದಾರರರು ಇದ್ದರು. ಜಿಲ್ಲಾಮಟ್ಟದ ಗುಂಪು ಕ್ರೀಡಾಕೂಟಗಳು ಮತ್ತು ಅಥ್ಲೆಟಿಕ್ ಕ್ರೀಡಾಕೂಟಗಳು ಕ್ರೀಡಾಶಾಲೆ ಮತ್ತು ಶಿಕ್ಷಕರ ತರಬೇತಿ ಕೇಂದ್ರದಲ್ಲಿ ನಡೆದವು.

ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ 100 ಮೀ, 200 ಮೀ, 400ಮೀ, 5000 ಮೀ ಓಟಗಳು, ಉದ್ದಜಿಗಿತ, ಎತ್ತರಜಿಗಿತ, ಗುಂಡು ಎಸೆತ, ಟ್ರಿಪಲ್ ಜಂಪ್, ಜಾವೆಲಿನ್ ಎಸೆತ, ಡಿಸ್ಕಸ್ ಎಸೆತ, 110 ಮೀ ಹರ್ಡಲ್ಸ್, 4100 ಮೀ ರಿಲೇ, 4400 ಮೀ ರಿಲೆ ಓಟಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು.

ಗುಂಪು ಸ್ಪರ್ಧೆಗಳಾದ ವಾಲಿಬಾಲ್, ಕಬಡ್ಡಿ, ಖೋ ಖೋ, ಫುಟ್‍ಬಾಲ್, ಷಟಲ್ ಬ್ಯಾಡ್ಮಿಂಟನ್, ಬಾಸ್ಕೆಟ್‍ಬಾಲ್, ಹ್ಯಾಂಡ್‍ಬಾಲ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್, ಹಾಕಿ, ಥ್ರೋಬಾಲ್ ಸ್ಪರ್ಧೆಗಳಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದರು.