ಗೋಣಿಕೊಪ್ಪ ವರದಿ, ಸೆ. 20 : ಗೋಣಿಕೊಪ್ಪ ದಸರಾ ಆಚರಣೆಯಲ್ಲಿ ಪ್ರಚಾರ ಸಮಿತಿಯಲ್ಲಿ ಪತ್ರಕರ್ತರ ಸಂಘದ ಸದಸ್ಯರಲ್ಲದವರಿಗೆ ಅವಕಾಶ ನೀಡಿರುವ ಗೋಣಿಕೊಪ್ಪ ಕಾವೇರಿ ದಸರಾ ಸಮಿತಿ ನಡೆಯನ್ನು ಖಂಡಿಸಿ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ನೀಡಿದ ದೂರಿನಂತೆ ಜಿಲ್ಲಾಧಿಕಾರಿ ತಹಶೀಲ್ದಾರ್ ಅವರಿಗೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಗೋಣಿಕೊಪ್ಪ ದಸರಾಕ್ಕೆ ಸರ್ಕಾರದ ಅನುದಾನ ಆರಂಭವಾದ ವರ್ಷದಿಂದ ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ದಸರಾ ಆಚರಣೆ ಸಂದರ್ಭ ಪ್ರಚಾರ ಸಮಿತಿ ಅಧ್ಯಕ್ಷ, ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಈ ಬಾರಿ, ಜಗದೀಶ್ ಜೋಡುಬೀಟಿ ಎಂಬವರನ್ನು ನೇಮಕ ಮಾಡಿಕೊಂಡು ಮುಂದುವರಿಯುತ್ತಿರುವ ಕಾವೇರಿ ದಸರಾ ಸಮಿತಿ ನಡೆಗೆ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ವಿರೋಧ ವ್ಯಕ್ತಗೊಂಡಿತ್ತು.

ಇದರಂತೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಚಂಗಪ್ಪ, ಕಾವೇರಿ ದಸರಾ ಸಮಿತಿಗೆ ಈ ಹಿಂದೆ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಮುಂದುವರಿಸುವಂತೆ ಪತ್ರ ನೀಡಿದ್ದರು. ಇದರಂತೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾ ರೈ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ದೂರನ್ನು ಪರಿಗಣಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಹಶೀಲ್ದಾರ್ ಪುರಂದರ ಅವರಿಗೆ ಈ ಬಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ. ಕಾವೇರಿ ದಸರಾ ಸಮಿತಿ ವತಿಯಿಂದ ನಡೆಸುತ್ತಿರುವ ದಸರಾ ಆಚರಣೆಯ ರೂಪುರೇಷೆ, ಮಾಹಿತಿ, ದಾಖಲೆ ನೀಡುವಂತೆ ತಹಶೀಲ್ದಾರ್ ಪುರಂದರ ಅವರು ಕಾವೇರಿ ದಸರಾ ಸಮಿತಿಗೆ ಸೂಚಿಸಿದೆ. ಸರ್ಕಾರದ ಅನುದಾನ ಬಳಕೆ ಮಾಡಿಕೊಂಡು ನಡೆಸುತ್ತಿರುವ ದಸರಾ ಆಚರಣೆಯಲ್ಲಿ ಪತ್ರಕರ್ತ ಸಂಘಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಕಾವೇರಿ ದಸರಾ ಸಮಿತಿ ದಸರಾ ಆಚರಣೆಯಲ್ಲಿನ ಲೋಪ ಸಾರ್ವಜನಿಕರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.