ಕರಿಕೆ, ಸೆ. 20: ರಾಜ್ಯ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಬಯೋಮೆಟ್ರಿಕ್ ನೀಡುವದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸರಕಾರದ ಆದೇಶದಂತೆ ಪ್ರತಿ ತಿಂಗಳ ಮೂವತ್ತೊಂದನೇ ದಿನಾಂಕ ದೊಳಗಾಗಿ ಒಂದು ಕುಟುಂಬದ ಓರ್ವ ಸದಸ್ಯ ಬಯೋಮೆಟ್ರಿಕ್ ನೀಡಿ ಪಡಿತರ ಆಹಾರ ಪಡೆಯುವದು ಕಡ್ಡಾಯವಾಗಿದ್ದು, ಅದರಂತೆ ನ್ಯಾಯಬೆಲೆ ಅಂಗಡಿಯ ಮುಂದೆ ಪ್ರತಿದಿನ ಸರತಿ ಸಾಲಿನಲ್ಲಿ ನೂರಾರು ಜನ ಬಂದು ನಿಲ್ಲುತಿದ್ದು ಸರ್ವರ್ ಸಮಸ್ಯೆಯಿಂದಾಗಿ ದಿನಕ್ಕೆ ಎರಡು ಮೂರು ಜನರ ಬಯೋಮೆಟ್ರಿಕ್ ಮಾತ್ರ ನಡೆಯುತ್ತಿದೆ.

ಉಳಿದವರು ತಮ್ಮ ಕೆಲಸವಾಗದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಹಿಡಿಶಾಪ ಹಾಕುತ್ತಾ ಹಿಂದಿರುಗಿ ಹೋಗುವದು ಸಾಮಾನ್ಯವಾಗಿದೆ. ಗಡಿ ಗ್ರಾಮ ಕರಿಕೆಯಲ್ಲಿ ಬಡ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ದೈನಂದಿನ ತಮ್ಮ ಕೆಲಸ ಕಾರ್ಯವನ್ನು ಬದಿಗೊತ್ತಿ ಏಳೆಂಟು ಕಿ.ಮಿ.ದೂರದ ನ್ಯಾಯ ಬೆಲೆ ಅಂಗಡಿ ಮುಂದೆ ಹೋಗಿ ದಿನ ಕಳೆಯು ವದರಿಂದ ಅತ್ತ ಕೆಲಸವೂ ಇಲ್ಲ ಇತ್ತ ಪಡಿತರ ಪಡೆಯಲು ಆಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿ ಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರ್ದೇಶಕ ಗೌರವ್ ಅವರನ್ನು ‘ಶಕ್ತಿ' ಮಾತನಾಡಿಸಿದಾಗ ಸರ್ವರ್ ಸಮಸ್ಯೆ ಇಡೀ ರಾಜ್ಯದಲ್ಲಿದ್ದು ಇಪ್ಪತ್ತಾರು ಜಿಲ್ಲೆಯ ನ್ಯಾಯಬೆಲೆ ಅಂಗಡಿ ಯವರು ಒಂದೇ ಸರ್ವರ್ ಉಪಯೋಗಿಸುತ್ತಿದ್ದು ಇದರಿಂದಾಗಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಆಹಾರ ಇಲಾಖೆಯ ಮುಖ್ಯ ಕಚೇರಿಗೆ ಮಾಹಿತಿ ನೀಡಿದ್ದು, ಈ ಸಮಸ್ಯೆ ಸರಿಪಡಿಸಲು ಕೂಡಲೇ ಕ್ರಮ ವಹಿಸಲಾಗುವದು ಎಂದರು.

-ಹೊದ್ದೆಟ್ಟಿ ಸುಧೀರ್