*ಗೋಣಿಕೊಪ್ಪಲು, ಸೆ. 20: ಜಿಲ್ಲೆಯ 47 ಪ್ರೌಢಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿತರಿಸಲು ಬೈಸಿಕಲ್ ಬಂದಿದ್ದು, ಇದರ ಬಿಡಿಭಾಗಗಳ ಜೋಡಣೆ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲಿನ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಸೈಕಲ್‍ನ ಬಿಡಿಭಾಗಗಳ ಜೋಡಣೆ ಕಾರ್ಯ ಕಂಪೆನಿಯ ವತಿಯಿಂದ ನಡೆಯುತ್ತಿದೆ.

ಜಿಲ್ಲೆಯ ಸುಮಾರು 3155 ವಿದ್ಯಾರ್ಥಿಗಳಿಗೆ ವಿತರಿಸಲು ಸರ್ಕಾರದಿಂದ ಬೈಸಿಕಲ್‍ನ ಬಿಡಿಭಾಗಗಳ ಜೋಡಣೆಯಾಗುತ್ತಿದೆ. ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ 3499 ವಿದ್ಯಾರ್ಥಿಗಳಿಗೆ ಬೈಸಿಕಲ್‍ನ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ 3155 ವಿದ್ಯಾರ್ಥಿಗಳಿಗಷ್ಟೇ ಸೈಕಲ್ ಬಂದಿದೆ. ಉಳಿದ ಸೈಕಲ್‍ಗಳು ಕೆಲದಿನಗಳಲ್ಲಿ ವಿತರಣೆಯಾಗಲಿದೆ ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೈಸಿಕಲ್ ಜೋಡಣೆ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಶಾಸಕರು ಭೇಟಿ ನೀಡಿ ಶೀಘ್ರಗತಿಯಲ್ಲಿ ಜೋಡಣೆ ಕಾರ್ಯ ಮುಗಿಸಿ ಶಾಲೆಗಳಿಗೆ ಸೈಕಲ್ ವಿತರಣೆ ಮಾಡಲು ಅನುವು ಮಾಡಿಕೊಡಬೇಕೆಂದು ಸೈಕಲ್ ಜೋಡಣೆಯ ವ್ಯವಸ್ಥಾಪಕರಿಗೆ ಸೂಚಿಸಿದರು. ಈ ಹಿಂದೆ ಸೈಕಲ್ ಜೋಡಣೆಯ ಕಾರ್ಯವು ತಿತಿಮತಿ ಮರೂರು ಆಶ್ರಮ ಶಾಲೆಯಲ್ಲಿ ನಡೆಯುತಿತ್ತು. ಜೋಡಣೆ ಕಾರ್ಯ ಸಂದರ್ಭ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತೊಡಕಾಗಲಿದೆ ಎಂದು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿ ಜೋಡಣೆಗೆ ಅನುವು ಮಾಡಿಕೊಡಲಾಗಿದೆ ಎಂದು ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು.