ಕೂಡಿಗೆ, ಸೆ. 20: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೈಗಾರಿಕಾ ಬಡಾವಣೆಯ ಸಮೀಪವಿರುವ ಸುಂದರನಗರ ರುದ್ರಭೂಮಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಾಗಕ್ಕೆ ಸಂಬಂಧಪಟ್ಟಂತೆ ಅನೇಕ ಬಾರಿ ಸ್ಥಳೀಯ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ಹಾಗೂ ಸರ್ವೆ ಇಲಾಖೆಗೆ ಪತ್ರ ವ್ಯವಹಾರ ನಡೆಸಿದ್ದರು. ಈ ಜಾಗವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಕೈಗಾರಿಕಾ ಘಟಕ ಸ್ಥಾಪನೆಗೆ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪರ ವಿರೋಧ ಚರ್ಚೆಗಳು ನಡೆದಿದ್ದವು. ಕಂದಾಯ ಇಲಾಖೆಯ ಮೂಲಕ ಸರ್ವೆ ಪ್ರಕ್ರಿಯೆ ಕೂಡಾ ನಡೆದಿತ್ತು. ಆದರೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಂಜೂರಾಗಿರುವ ಜಾಗ ಎಂದು ಕೈಗಾರಿಕೋದ್ಯಮಿ ಒಬ್ಬರು ಕೈಗಾರಿಕಾ ಘಟಕ ಸ್ಥಾಪನೆಗೆ ಮುಂದಾದ ವೇಳೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆಯವರು ಜಂಟಿಯಾಗಿ ಹಳೆಯ ಕಡತಗಳನ್ನು ಪರಿಶೀಲನೆ ನಡೆಸಿ ಒಂದು ವಾರದೊಳಗಾಗಿ ಸಮರ್ಪಕ ವರದಿ ನೀಡುವಂತೆ ಸೂಚನೆ ನೀಡಿದರು.

ಈ ರುದ್ರ್ರಭೂಮಿ ಮತ್ತು ಕೆರೆಯು ಬ್ರಿಟೀಷರ ಕಾಲದಿಂದಲೂ ಇದ್ದು ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಿತ್ತು. ಆದರೆ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯವರು ಕೈಗಾರಿಕಾ ಪ್ರದೇಶವನ್ನು ಗುರುತಿಸುವ ಸಂದರ್ಭ ನಕ್ಷೆಯೊಳಗೆ ಸೇರಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಗ್ರಾಮಸ್ಥರ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಕಂದಾಯ ನಕ್ಷೆಯಲ್ಲಿ ರುದ್ರಭೂಮಿ ಮತ್ತು ಕೆರೆ ಇರುವ ಬಗ್ಗೆ ಹಳೆಯ ನಕ್ಷೆಯನ್ನು ಸಮರ್ಪಕವಾಗಿ ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆರೆ, ರುದ್ರ್ರಭೂಮಿ ನಕ್ಷೆಯಲ್ಲಿದ್ದಲ್ಲಿ ಗ್ರಾಮಸ್ಥರ ಅನುಕೂಲಕ್ಕೆ ಒದಗಿಸುವದರ ಜೊತೆಗೆ ಕೈಗಾರಿಕಾ ಘಟಕ ಪ್ರಾರಂಭಿಸಲು ಸಿದ್ಧರಿರುವ ವ್ಯಕ್ತಿಗೆ ಬದಲಿ ಜಾಗ ನೀಡುವ ವ್ಯವಸ್ಥೆ ಕಲ್ಪಿಸಲಾಗುವದು ಎಂದರು.

ಈ ಸಂದರ್ಭ ಎಡಿಎಲ್‍ಆರ್ ಸರ್ವೆ ಷಂಶುದ್ಧೀನ್, ಜಿಪಂ ಸದಸ್ಯೆ ಕೆ.ಆರ್.ಮಂಜುಳಾ, ತಾ.ಪಂ ಸದಸ್ಯ ಗಣೇಶ್, ಗ್ರಾ.ಪಂ ಸದಸ್ಯೆ ಜ್ಯೋತಿ ಪ್ರಮೀಳಾ, ಸಹಕಾರ ಸಂಘದ ನಿರ್ದೇಶಕ ಬೋಗಪ್ಪ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.