ಮಡಿಕೇರಿ, ಸೆ. 20: ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಪಾಕ್ಷಿಕ ಕಾರ್ಯಕ್ರಮದ ಜಾಗೃತಿ ಜಾಥಾಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲೆಯ ಎಲ್ಲಾ ಜನರಿಗೆ ಆರೋಗ್ಯ ಸೇವೆ ಒದಗಿಸುವದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಶೇ.100ರಷ್ಟು ಆರೋಗ್ಯ ಸಂಬಂಧಿಸಿದ ವೆಚ್ಚ ಭರಿಸಲಿದೆ ಎಂದು ತಿಳಿಸಿದರು.

ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವವರು ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ ನೋಂದಾಯಿಸಿರುವವರು ಒಂದು ವರ್ಷಕ್ಕೆ ರೂ. 5 ಲಕ್ಷದವರೆಗೆ ಉಚಿತ ಚಿಕಿತ್ಸ ಸೌಲಭ್ಯ ದೊರೆಯಲಿದೆ. ಎಪಿಎಲ್ ಕಾರ್ಡ್‍ದಾರರಿಗೆ ಸರ್ಕಾರಿ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಕುಟುಂಬಕ್ಕೆ ರೂ. 1.5 ಲಕ್ಷ ಚಿಕಿತ್ಸೆ ದೊರೆಯಲಿದೆ ಎಂದು ಅವರು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ ಮಾತನಾಡಿ, ಹೃದಯ ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮತ್ತಿತರ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪ ಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1600 ಚಿಕಿತ್ಸೆಗಳು ಲಭ್ಯವಾಗಲಿದೆ. 169 ತುರ್ತು ಚಿಕಿತ್ಸೆಗಳಿಗೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಎಬಿಎಆರ್‍ಕೆ ಕಾರ್ಡ್‍ನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನೀಡಲಾಗುತ್ತದೆ. ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್‍ಗಳನ್ನು ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದು ಎಂದರು.

ಸಮುದಾಯ ವೈದ್ಯಶಾಸ್ತ್ರ ಮುಖ್ಯಸ್ಥ ಡಾ. ರಾಮಚಂದ್ರ ಕಾಮತ್, ಆರ್‍ಸಿಎಚ್ ಅಧಿಕಾರಿ ಡಾ. ಗೋಪಿನಾಥ್, ಡಾ. ಲೋಕೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ಜಿಲ್ಲಾ ಆಯುಷ್ಮಾನ್ ಭಾರತ್ ಕಾರ್ಯಕ್ರಮ ಜಿಲ್ಲಾ ಸಂಯೋಜಕ ತೇಜಸ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮ ವ್ಯವಸ್ಥಾಪಕ ದೇವರಾಜು, ವಿಜ್ಞಾನ ಸಂಸ್ಥೆಯ ಮೇರಿ ನಾಣಯ್ಯ ಇತರರು ಇದ್ದರು.

ಇನ್ನಷ್ಟು ಮಾಹಿತಿ: ಟೋಲ್ ಫ್ರೀ ಸಂಖ್ಯೆ : 1800 425 8330ಗೆ ಕರೆ ಮಾಡಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಬಗ್ಗೆ ತಿಳಿದುಕೊಳ್ಳಬಹುದು ಹಾಗೂ ಸಂಬಂಧಿಸಿದ ಆಸ್ಪತ್ರೆಯ ಆರೋಗ್ಯ ಮಿತ್ರರ ಮೊಬೈಲ್ ಸಂಖ್ಯೆ ಪಡೆದುಕೊಂಡು ಸಂಪರ್ಕಿಸಬಹುದು. ವೆಬ್‍ಸೈಟ್ :ತಿತಿತಿ.sಚಿsಣ.gov.iಟಿ/home, ತಿತಿತಿ.ಚಿಡಿogಥಿಚಿ. ಞಚಿಡಿಟಿಚಿಣಚಿಞಚಿ.gov.iಟಿನಲ್ಲಿ ನೋಡಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಕಟಿಸಿರುವ ಸಮೀಪದ ನೊಂದಾಯಿತ ಆಸ್ಪತ್ರೆಗಳ ಪಟ್ಟಿ ನೋಡಬಹುದು.

ಹತ್ತಿರದ ಸರ್ಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು, ಆರೋಗ್ಯ ಸಹಾಯವಾಣಿ 104, ಟೋಲ್ ಫ್ರೀ ಸಂಖ್ಯೆ 1800 425 8330ನ್ನು ಸಂಪರ್ಕಿಸಬಹುದು.