ಮಡಿಕೇರಿ, ಸೆ. 20: ಇದೇ ತಾ. 24 ರಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆ ನಡೆಯಲಿದೆ; ಈ ವೇಳೆ ಪ್ರಸಕ್ತ ಇರುವ 17 ಶಾಖೆಗಳೊಂದಿಗೆ ನೂತನವಾಗಿ ಕೊಡ್ಲಿಪೇಟೆ, ಹೆಬ್ಬಾಲೆ, ಬಾಳೆಲೆ, ಟಿ. ಶೆಟ್ಟಿಗೇರಿ, ಕೊಂಡಂಗೇರಿ, ಸಂಪಾಜೆ ಯಲ್ಲಿ ಶಾಖೆ ಆರಂಭಿಸಲು ತೀರ್ಮಾನದೊಂದಿಗೆ; ಬ್ಯಾಂಕ್ ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಲಾಗುವದು ಎಂದು ಅಧ್ಯಕ್ಷ ಕೊಡಂದೇರ ಪಿ. ಬಾಂಡ್ ಗಣಪತಿ ತಿಳಿಸಿದ್ದಾರೆ.

ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಎಲ್ಲಾ ಶಾಖೆಗಳಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸುವ ಆಶಯದೊಂದಿಗೆ; 2021ರ ಶತಮಾನೋತ್ಸವ ವರ್ಷದಲ್ಲಿ ಹಿರಿಯ ಸಹಕಾರಿಗಳ ಮಾರ್ಗದರ್ಶನದಲ್ಲಿ ನೂತನ ಭವನ ನಿರ್ಮಾಣ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ರೂಪಿಸುವ ಇಂಗಿತ ವ್ಯಕ್ತಪಡಿಸಿದರು.

ಭವಿಷ್ಯದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಎಲ್ಲಾ ಶಾಖೆಗಳಲ್ಲಿ ಆಧುನಿಕ ವ್ಯವಸ್ಥೆಯಡಿ ಏಕರೂಪ ಕಾರ್ಯನಿರ್ವಹಣೆಯೊಂದಿಗೆ, ಎಲ್ಲಾ ಪ್ರಾಥಮಿಕ ಕೃಷಿ ಬ್ಯಾಂಕ್‍ಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲು ಪ್ರಯತ್ನಿಸು ವದಾಗಿ ಅವರು ವಿವರಿಸಿದರು.

ಪ್ರಾಕೃತಿಕ ವಿಕೋಪದಲ್ಲಿ ತೊಂದರೆಗೆ ಸಿಲುಕಿರುವ ಯಾವ ಸದಸ್ಯರಿಂದಲೂ ಬ್ಯಾಂಕ್ ಬಲವಂತದ ಸಾಲ ವಸೂಲಿಗೆ ಮುಂದಾಗಿಲ್ಲ ಎಂದು ಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಅವರು, ಸಂತ್ರಸ್ತ ಕುಟುಂಬಗಳು ಹಾಗೂ ಅಂತಹವರ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ನೆರವು ಕಲ್ಪಿಸಲಾಗಿದೆ ಎಂದು ಅಂಕಿ ಅಂಶ ನೀಡಿದರು.

ರೂ. 5.52 ಕೋಟಿ ಲಾಭ : ಪ್ರಸಕ್ತ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 5.52 ಕೋಟಿ ರೂ. ಲಾಭದಲ್ಲಿದ್ದು; ಸದಸ್ಯರಿಗೆ ಶೇ. 10 ಡಿವಿಡೆಂಡ್ ನೀಡಲಾಗುತ್ತಿದೆ; ಬ್ಯಾಂಕ್‍ನಿಂದ ರೈತರು , ಬೆಳೆಗಾರರು, ಗ್ರಾಮೀಣ ಜನತೆಯೊಂದಿಗೆ, ಸ್ವಸಹಾಯ ಗುಂಪುಗಳು, ಮಹಿಳಾ ಸಂಘಗಳಿಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ಕಲ್ಪಿಸುತ್ತಿದ್ದು; ಉದ್ದಿಮೆ, ವಾಹನ, ವಸತಿ ಮುಂತಾದ ಸಾಲ ಸೌಲಭ್ಯ ಒದಗಿಸುವದಾಗಿ ವಿವರಣೆಯಿತ್ತರು.

ಪ್ರಕೃತಿ ವಿಕೋಪ ನಿಧಿ : ಪ್ರಾಕೃತಿಕ ವಿಕೋಪ ಸಂತ್ರಸ್ತರ ಕಲ್ಯಾಣಕ್ಕಾಗಿ ಬ್ಯಾಂಕ್ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಯ ಜಂಟಿ ಖಾತೆಯಲ್ಲಿ ಪರಿಹಾರ ನಿಧಿ ಖಾತೆ ಸ್ಥಾಪಿಸಿದ್ದು; ಬ್ಯಾಂಕ್ ಆಡಳಿತ ನಿರ್ವಹಣೆ ಸುಗಮಗೊಳಿಸಲು ಖಾಯಂ ಅಧಿಕಾರಿಯನ್ನು ಸರಕಾರ ನೇಮಿಸಬೇಕೆಂದು ಒತ್ತಾಯಿಸಿದರು.

ಅಲ್ಲದೆ ಬ್ಯಾಂಕ್‍ನ ಸರ್ವತೋಮುಖ ಅಭಿವೃದ್ಧಿ ಯೊಂದಿಗೆ ರೈತರು, ಗ್ರಾಮೀಣ ಜನತೆಯೂ ಸೇರಿದಂತೆ ಎಲ್ಲಾ ವರ್ಗಕ್ಕೆ ಸಾಲ ಸೌಲಭ್ಯ ಮತ್ತು ಪ್ರಗತಿಗೆ ಪ್ರೋತ್ಸಾಹಿಸುವದಾಗಿ ಅಧ್ಯಕ್ಷರು ವಿಶ್ವಾಸದ ನುಡಿಯಾಡಿದರು. ಈ ಸಂದರ್ಭ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರು ಗಳಾದ ಬಿ.ಡಿ. ಮಂಜುನಾಥ್, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ರಘು ನಾಣಯ್ಯ, ಹೊಟ್ಟೆಂಗಡ ರಮೇಶ್, ಕೆ. ಸುಬ್ರಮಣಿ, ಬಿ.ಕೆ. ಚಿಣ್ಣಪ್ಪ, ಉಷಾ ತೇಜಸ್ವಿ, ಎಸ್.ಬಿ. ಭರತ್‍ಕುಮಾರ್, ಕಿಮ್ಮುಡಿರ ಜಗದೀಶ್, ಗೋಪಾಲಕೃಷ್ಣ, ಹೊಸೂರು ಸತೀಶ್ ಜೋಯಪ್ಪ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.