ಮಡಿಕೇರಿ, ಸೆ. 20: ಕಳೆದ ತಿಂಗಳು ಆಗಸ್ಟ್ 9 ರಂದು ಕೋರಂಗಾಲ ಗ್ರಾಮದ ಮನೆಯೊಂದರಲ್ಲಿ ಭೂಕುಸಿತದಿಂದ ಮೃತರಾಗಿರುವ ಕುಟುಂಬಗಳಿಗೆ ಭಾಗಮಂಡಲ ಕೃಷಿಪತ್ತಿನ ಸಹಕಾರ ಸಂಘವು ಸಹಾಯ ಹಸ್ತ ನೀಡಿದೆ. ಸಂಘದಿಂದ ಪಡೆಯಲಾಗಿದ್ದ ಸಾಲವನ್ನು ಎರಡು ಕುಟುಂಬಗಳಿಗೆ ಮನ್ನಾ ಮಾಡಿದ್ದು; ಇನ್ನೆರಡು ಕುಟುಂಬಸ್ಥರಿಗೆ ತಲಾ ರೂ. 10 ಸಾವಿರ ನೆರವು ಕಲ್ಪಿಸಿದೆ.

ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದ ಕೋರಂಗಾಲ ಗ್ರಾಮದ ಅತ್ತೇಡಿ ಎಂ. ಯಶವಂತ ಹಾಗೂ ಬೋಳನ ಎ. ಬಾಲಕೃಷ್ಣ ಇವರ ಪತ್ನಿ ಬೋಳನ ಬಿ. ಯಮುನ ಮತ್ತು ಇದೇ ಗ್ರಾಮದ ಕಾಳನ ಎಂ. ಉದಯ ಹಾಗೂ ನಡುವೆಟ್ಟಿರ ರಾಜು ಇವರುಗಳು ತಾ. 9 ರಂದು ಕೋರಂಗಾಲದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮರಣ ಹೊಂದಿದ್ದರು. ಇವರ ಕುಟುಂಬಸ್ಥರಿಗೆ ನೆರವು ನೀಡುವ ನಿಟ್ಟಿನಲ್ಲಿ ಸಂಘದ ಮಹಾಸಭೆಯ ತೀರ್ಮಾನದಂತೆ ಸದಸ್ಯರು ತಮ್ಮ ಡಿವೆಡೆಂಡ್ ಮೊತ್ತದಲ್ಲಿ ಶೇ. 1.5 ಬಿಟ್ಟುಕೊಟ್ಟಿದ್ದರು.

ಈ ಮೊತ್ತದಲ್ಲಿ ಬೋಳನ ಎ. ಬಾಲಕೃಷ್ಣ ಇವರು ಹೊಂದಿಕೊಂಡಿದ್ದ ವಾಹನ ಸಾಲ ಅಸಲು ಮತ್ತು ಬಡ್ಡಿ ಸೇರಿ ರೂ.37068 ಹಾಗೂ ಅತ್ತೇಡಿ ಎಂ. ಯಶವಂತ್ ಹೊಂದಿಕೊಂಡಿದ್ದ ವಾಹನ ಸಾಲ ಮತ್ತು ಆಭರಣ ಮೇಲಿನ ಸಾಲ ಅಸಲು ಮತ್ತು ಬಡ್ಡಿ ಸೇರಿ ರೂ.31720ಗಳನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಕಾಳನ ಎಂ. ಉದಯ ಹಾಗೂ ನಡುವೆಟ್ಟಿರ ರಾಜು ಇವರುಗಳ ಕುಟುಂಬಸ್ಥರಿಗೆ ತಲಾ ರೂ. 10 ಸಾವಿರ ನೆರವು ನೀಡಲಾಯಿತು. ಆಭರಣ, ವಾಹನಗಳ ಕೀ ಮತ್ತು ದಾಖಲಾತಿಗಳು ಹಾಗೂ ಚೆಕ್ಕನ್ನು ಸಂಘದ ಅಧ್ಯಕ್ಷ ಹೊಸೂರು ಜೆ. ಸತೀಶ್ ಕುಮಾರ್ ಅವರು ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ಸಂಘದ ಕಚೇರಿಯಲ್ಲಿ ಸಂಬಂಧಿಸಿದ ಕುಟುಂಬಸ್ಥರಿಗೆ ಹಸ್ತಾಂತರಿಸಿದರು.