*ಗೋಣಿಕೊಪ್ಪಲು ಸೆ. 20: 41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ಶ್ರೀ ಕಾವೇರಿ ದಸರಾ ಸಮಿತಿ ಚಿಂತನೆ ಅರಿಸಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ ಸಲಹೆ ಮಾಡಿದರು.

ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ದಸರಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಜನೋತ್ಸವದಲ್ಲಿ ಯಾವದೇ ರಾಜಕೀಯ ನಡೆಸದೆ ದೇವಿಯ ಆರಾಧನೆಗೆ 10ದಿನಗಳ ಕಾರ್ಯಕ್ರಮಗಳನ್ನು ನೀಡುವದಾಗಿ ತಿಳಿಸಿದರು.

ದೇವಿ ಪ್ರತಿಷ್ಠಾಪನೆ ಪೂಜಾ ಕಾರ್ಯದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ಕಾವೇರಿ ಕಲಾ ವೇದಿಕೆಯಲ್ಲಿ ನಡೆಸಲಾಗುವದು. ಇದರ ಪ್ರಯುಕ್ತ ಯುವ ದಸರಾ, ಮಹಿಳಾ ದಸರಾ, ರೈತ ದಸರಾ, ಮಕ್ಕಳ ದಸರಾ, ಕ್ರೀಡಾಕೂಟ ಸೇರಿದಂತೆ ಸ್ಥಳೀಯ ಹಾಗೂ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

9 ದಿನಗಳು ನಡೆಯುವ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾಪ್ರಿಯರ ಮನತಣಿಸಲು ವಿವಿಧ ಕಾರ್ಯಕ್ರಮಗಳನ್ನು ವಿಶಿಷ್ಟ ರೀತಿಯಲ್ಲಿ ನೀಡಲು ಚಿಂತನೆ ನಡೆದಿದೆ. ಈ ಪ್ರಕಾರ ಉಪಸಮಿತಿಗಳು ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದರು.

ದಸರಾ ಸಮಿತಿಯಲ್ಲಿ ಯಾವದೇ ಪಕ್ಷ ರಾಜಕೀಯ ನಡೆಯುತ್ತಿಲ್ಲ. ಹಿರಿಯರನ್ನು ಮನದಲ್ಲಿಟ್ಟು, ಸೂಕ್ತ ವೇದಿಕೆ ಕಲ್ಪಿಸಿ ಗೌರವಿಸುವ ವ್ಯವಸ್ಥೆಗೆ ಮುಂದಾಗಿದ್ದೇವೆ. ಸಮಿತಿಯಲ್ಲಿ ಪಾರದರ್ಶಕತೆ ಮತ್ತು ಚಟುವಟಿಕೆ ಯಿಂದ ಕಾರ್ಯನಿರ್ವಹಿಸುವವರನ್ನು ಮತ್ತು ಉತ್ಸಾಹಿಗಳನ್ನು ಆಯ್ಕೆ ಮಾಡಲಾಗಿದೆ. ಹೊಸ ಹುರುಪು ಹೊಂದಿರುವವರಿಗೆ ಸಮಿತಿಯಲ್ಲಿ ಅವಕಾಶ ಕಲ್ಪಿಸಿ ದೇವಿಯ ಸೇವೆಗೆ ಅನುವು ಮಾಡಿಕೊಡಲಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಶ್ರೀ ಕಾವೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕುಲ್ಲಚಂಡ ಬೋಪಣ್ಣ, ಕಾರ್ಯದರ್ಶಿ ಜಪ್ಪು, ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.