ಕೂಡಿಗೆ, ಸೆ. 20: ಕೊಡಗು ಜಿಲ್ಲಾ ಕೃಷಿ ಇಲಾಖೆಯ ವತಿಯಿಂದ ತಾಲೂಕುವಾರು ಮಣ್ಣು ಮಾದರಿ ಸಂಗ್ರಹಣೆ, ವಿಶ್ಲೇಷಣೆ, ಮಣ್ಣು ಆರೋಗ್ಯ ಚೀಟಿ ವಿತರಣೆ ಕಾರ್ಯ ನಡೆಯುತಿದ್ದು, ಜಿಲ್ಲೆಯಲ್ಲಿ ಈಗಾಗಲೇ 54345 ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಗಿದೆ.

ಕೂಡಿಗೆಯಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ತಾಲೂಕುವಾರು ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನ ವ್ಯಾಪ್ತಿಯ ರೈತರು ನೀಡಿದ ತಮ್ಮ ಕೃಷಿ ಭೂಮಿಯ ಮಣ್ಣುಗಳನ್ನು ಪರೀಕ್ಷಿಸಿ, ರೈತರಿಗೆ ಆರೋಗ್ಯ ಚೀಟಿ ವಿತರಿಸಲಾಗಿದ್ದು, ಫಲವತ್ತತೆ ಹೆಚ್ಚಿಸಲು ಬಳಸಬಹುದಾದ ಸಾವಯವ ಗೊಬ್ಬರ, ಪೌಷ್ಟಿಕಾಂಶಕ್ಕೆ ರಂಜಕ ಮತ್ತು ಸುಣ್ಣ ಬಳಕೆಯ ಬಗ್ಗೆ ಹಾಗೂ ಆಯಾ ಮಣ್ಣಿನಲ್ಲಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಅದರಂತೆ ಮಡಿಕೇರಿ ತಾಲೂಕಿನಲ್ಲಿ 6071 ಮಣ್ಣು ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಕಳೆದ ಬಾರಿ ಉಳಿಕೆಯಾಗಿದ್ದ ಹಾಗೂ ಪ್ರಸ್ತುತ ಪರೀಕ್ಷಿಸಲಾದ 10790 ಮಣ್ಣಿನ ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಗಿದೆ.

ಸೋಮವಾರಪೇಟೆ ತಾಲೂಕಿನಾದ್ಯಂತ 23953 ಮಣ್ಣು ಮಾದರಿಯನ್ನು ರೈತರು ಪರೀಕ್ಷಾ ಕೇಂದ್ರಕ್ಕೆ ನೀಡಿದ್ದು, ಕಳೆದ ಬಾರಿ ಉಳಿಕೆಯಾಗಿದ್ದ 24313 ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಸಲಾಗಿದೆ.

ವೀರಾಜಪೇಟೆ ತಾಲೂಕಿನ 19324 ಮಣ್ಣು ಮಾದರಿ ಸಂಗ್ರಹವಾಗಿದ್ದು, ಮಣ್ಣನ್ನು ಪರೀಕ್ಷಿಸಿ 19242 ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಮಣ್ಣು ಆರೋಗ್ಯ ಕೇಂದ್ರದ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡು, ಆ ಗ್ರಾಮದಲ್ಲಿ ಮಣ್ಣು ಪರೀಕ್ಷೆಯ ಬಗ್ಗೆ ಪ್ರಾತ್ಯಕ್ಷತೆ, ವಿಶ್ಲೇಷಣೆ ಮತ್ತು ಆರೋಗ್ಯ ಚೀಟಿಯ ಮಹತ್ವ, ಸಾವಯವ ಗೊಬ್ಬರ ಬಳಕೆ, ಬೆಳೆಗಳಾದ ಕಾಫಿ, ಏಲಕ್ಕಿ, ಕಿತ್ತಳೆ, ಭತ್ತ, ಜೋಳ ಮುಂತಾದ ಬೆಳೆಗಳ ಬಗ್ಗೆ ದತ್ತು ಗ್ರಾಮದಲ್ಲಿ ಪ್ರಾತ್ಯಕ್ಷತೆ ನೀಡಲಾಗುತ್ತಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಂಜರಾಯಪಟ್ಟಣ, ಮಡಿಕೇರಿ ತಾಲೂಕಿನ ಹಾಕ್ತೂರು, ವೀರಾಜಪೇಟೆ ತಾಲೂಕಿನ ಕದನೂರು ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ನಂಜರಾಯಪಟ್ಟಣದಲ್ಲಿ 321, ಹಾಕತ್ತೂರಿನಲ್ಲಿ 361, ಕದನೂರಿನಲ್ಲಿ 392 ಪ್ರಾತ್ಯಕ್ಷತೆ ನೀಡಲಾಗಿ, ಮಣ್ಣು ಆರೋಗ್ಯ ಚೀಟಿಗಳನ್ನು ವಿತರಣೆ ಮಾಡಲಾಗಿದೆ ಎಂದರು.

ಈಗಾಗಲೇ ಕೂಡಿಗೆಯಲ್ಲಿರುವ ಮಣ್ಣು ಆರೋಗ್ಯ ಕೇಂದ್ರದಲ್ಲಿ ಉತ್ತಮವಾದ ಪ್ರಯೋಗಾಲ ಯವಿದ್ದು, ಸಕಾಲದಲ್ಲಿ ಮಣ್ಣು ಪರೀಕ್ಷಿಸುವ ಸೌಲಭ್ಯವಿರುವ ದರಿಂದ ರೈತರು ತಮ್ಮ ಜಮೀನುಗಳ ಮಣ್ಣನ್ನು ತಂದು ಪರೀಕ್ಷಿಸಿಕೊಂಡು ತಮ್ಮ ಕೃಷಿ ಭೂಮಿಗಳ ಫಲವತ್ತೆಯ ಬಗ್ಗೆ ತಿಳಿದುಕೊಂಡು ಬೆಳೆ ಬೆಳೆಯಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭ ಪರೀಕ್ಷಾ ಕೇಂದ್ರದ ತಾಂತ್ರಿಕ ಸಿಬ್ಬಂದಿಗಳಾದ ಅಂಕಿತ, ನಂದೀಶ್, ಇಂದುಮಣಿ, ನಿವೇದಿತಾ, ಸಂದೀಪ ಇದ್ದರು.

- ಕೆ.ಕೆ. ನಾಗರಾಜಶೆಟ್ಟಿ.