ಮಡಿಕೇರಿ, ಸೆ. 20: ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಮತ್ತು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ.

ನಗರದ ಓಂಕಾರ ಸದನದಲ್ಲಿ ಜಿಲ್ಲಾ ಬಿ.ಜೆ.ಪಿ., ನಗರ ಬಿ.ಜೆ.ಪಿ. ಮತ್ತು ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ನಿಮಿತ್ತ ನಡೆಯುತ್ತಿರುವ ಸೇವಾ ಸಪ್ತಾಹದ ಅಂಗವಾಗಿ ವಿಶೇಷ ಚೇತನ ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಜನತಾ ಪಾರ್ಟಿಯು ಜನರÀ ಮತ್ತು ದೀನದಲಿತರ ಪರವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಹುಟ್ಟುಹಬ್ಬವನ್ನು ಆಚರಿಸುವದಾದರೆ, ಜನರ ಸೇವೆ ಮಾಡುವ ಮೂಲಕ ಆಚರಿಸಿ ಎಂಬ ಸಂದೇಶವನ್ನು ನೀಡಿದರಲ್ಲದೇ ಅವರು ಜನರ ಪ್ರಥಮ ಸೇವಕ ತಾವೇ ಎಂದದ್ದನ್ನು ರಂಜನ್ ಉಲ್ಲೇಖಿಸಿದರು.

ವೈದ್ಯಕೀಯ ಶಿಬಿರಗಳ ಜೊತೆಯಲ್ಲಿ ಎಲ್ಲಾ ರೀತಿಯ ಉಚಿತ ವೈದ್ಯಕೀಯ ನೆರವನ್ನು ಈ ಸಂದರ್ಭದಲ್ಲಿ ನೀಡಲಾಗುತ್ತಿದ್ದು, ಸಂಪೂರ್ಣ ಸುರಕ್ಷತೆ ಯೋಜನೆ, ವಿಶೇಷಚೇತನರ ಗುರುತಿನ ಚೀಟಿ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್‍ಅನ್ನು ಪಡೆದುಕೊಂಡು ಸರ್ಕಾರದ ಇತರ ಜನೋಪಯೋಗಿ ಹಾಗೂ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಸದುಪಯೋಗಪಡೆಯುವಂತೆ ಕಿವಿಮಾತು ಹೇಳಿದರು.

ಜಿಲ್ಲಾ ಬಿಜೆ.ಪಿ. ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಭಾರತೀಯ ಜನತಾ ಪಾರ್ಟಿಯು ಒಂದು ಜನಾಂದೋಲನದ ಪಕ್ಷವಾಗಿ ಬೆಳೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿತ್ವ ಮತ್ತು ಒಂದು ದೇಶ ಒಂದು ಸಂವಿಧಾನ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಂದು ಕಡೆಗಳಲ್ಲಿ ಸೇವಾ ಯೋಜನೆಯ ಮೂಲಕ ಬಿ.ಜೆ.ಪಿ.ಯ ನಾಯಕರು ಮತ್ತು ಕಾರ್ಯಕರ್ತರು ಜನರೊಂದಿಗೆ ಬೆರೆತು ಕೆಲಸ ಮಾಡಬೇಕೆಂದು ಕರೆ ನೀಡಿದರು. ವಿದ್ಯೆ ಮತ್ತು ಆರೋಗ್ಯದಿಂದ ಮಾನವ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಂಡು ದೇಶ ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಹೇಳಿದರು.

ಮಡಿಕೇರಿ ನಗರ ಬಿ.ಜೆ.ಪಿ.ಯ ಅಧ್ಯಕ್ಷ ಮತ್ತು ಸೇವಾ ಸಪ್ತಾಹದ ಸಂಚಾಲಕ ಮಹೇಶ್ ಜೈನಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಜನನಾಯಕರಾಗಿ ಬೆಳೆದಿದ್ದು ಮಾತ್ರವಲ್ಲದೆ ತಮ್ಮ ಸೇವಾ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವದು ವಿಶೇಷ. ಮೋದಿಯವರು ಜನರ ಸೇವಕನಾಗಿ ಕೆಲಸ ಮಾಡುತ್ತಿದ್ದು, ಜನರ ಮಧ್ಯೆ ಗುರುತಿಸಿಕೊಂಡು ಅವರೊಂದಿಗೆ ಬೆರೆತು ಕೆಲಸ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸೇವಾ ನಿರತರಾಗೋಣ ಎಂದು ಹೇಳಿದರು. ಶಾಸಕ ರಂಜನ್ ಅವರು ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಲ್ಲಿ ಸಂತ್ರಸ್ತರ ಪರವಾಗಿ ಕೆಲಸ ಮಾಡಿದ್ದು, ಅವರ ಪುತ್ರ ಅಮೇರಿಕಾದಿಂದ ಬಂದಾಗಲೆಲ್ಲ ಜಿಲ್ಲಾಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸುವದನ್ನು ಅವರು ಉಲ್ಲೇಖಿಸಿದರು.

ಜಿಲ್ಲಾ ಬಿ.ಜೆ.ಪಿಯ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ. ಬಿ.ಸಿ. ನವೀನ್ ಕುಮಾರ್ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ದೇಶದಲ್ಲಿ 2.60 ಕೋಟಿ ವಿವಿಧ ರೀತಿಯ ವಿಶೇಷಚೇತನರಿದ್ದು, ಈ ಪೈಕಿ ಶೇ 70ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದ್ದಾರೆ. ಅವರಿಗೆ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು. ಪ್ರತಿಯೊಬ್ಬರಲ್ಲಿ ಒಂದು ವಿಶೇಷವಾದ ಕೌಶಲ್ಯತೆ ಇದ್ದು ಅದನ್ನು ಗುರುತಿಸಿ ಅವರಿಗೆ ಜೀವನ ರೂಪಿಸಿಕೊಳ್ಳುವ ಕೆಲಸವನ್ನು ನಾವು ಮಾಡಿಕೊಳ್ಳಬೇಕಾಗಿದೆ. ಕೇಂದ್ರ ಸರ್ಕಾರ ಕೌಶಲ್ಯ ಭಾರತ ಯೋಜನೆ ಮತ್ತು ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮದ ಅಡಿಯಲ್ಲಿ 29 ರೀತಿಯ ಚಿಕಿತ್ಸೆಗಳನ್ನು ನೀಡುತ್ತಿದೆ. ಹುಟ್ಟಿದ ಮಗುವಿನಿಂದ ಹಿಡಿದು 18 ವರ್ಷದವರೆಗಿನ ಮಕ್ಕಳು ಈ ಚಿಕಿತ್ಸೆಗಳನ್ನು ಪಡೆಯಬಹುದಾಗಿದ್ದು, ಹೆಚ್ಚಿನ ಚಿಕಿತ್ಸೆಗಳನ್ನು ಕೂಡ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ಬಿ.ಜೆ.ಪಿ. ಮಹಿಳಾ ಮೋರ್ಚಾದ ಅಧ್ಯಕ್ಷೆ ಯಮುನಾ ಚಂಗಪ್ಪ, ಬಿ.ಜೆ.ಪಿ. ಪ್ರಮುಖರಾದ ಅನಿತಾ ಪೂವಯ್ಯ, ಕೆ.ಎಸ್. ರಮೇಶ್, ಮೋಂತಿ ಗಣೇಶ್ ಮತ್ತು ನರರೋಗ ತಜ್ಞ ಡಾ. ಸಫಲ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೇತ್ರ ತಜ್ಞರು, ಮಕ್ಕಳ ತಜ್ಞರು, ಕಿವಿ, ಮೂಗು, ಗಂಟಲು ತಜ್ಞರು, ಕೀಲು ತಜ್ಞರು, ಮನಶಾಸ್ತ್ರಜ್ಞರು ಮತ್ತು ನರರೋಗ ತಜ್ಞರು ಪಾಲ್ಗೊಂಡು 42 ಮಂದಿ ವಿಶೇಷಚೇತನ ಮಕ್ಕಳನ್ನು ಪರೀಕ್ಷಿಸಿ ಅವರ ಶಿಕ್ಷಕರು ಮತ್ತು ಪೋಷಕರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಭಾರತೀ ರಮೇಶ್ ಮತ್ತು ಪ್ರೇಮ ಪ್ರಾರ್ಥಿಸಿದರು. ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.