ಸೋಮವಾರಪೇಟೆ,ಸೆ.24: ತಾಲೂಕಿನ ಬಹುತೇಕ ಸ್ಥಳಗಳಲ್ಲಿ ಅನಧಿಕೃತ ಹೋಂ ಸ್ಟೇ ಮತ್ತು ರೆಸಾರ್ಟ್ಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗುತ್ತಿದ್ದು, ಮುಂದಿನ 10 ದಿನಗಳ ಒಳಗೆ ಈ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚಿಸಿದರು. ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆ ಶಾಸಕ ರಂಜನ್ ಅವರ ಅಧ್ಯಕ್ಷತೆಯಲ್ಲಿ, ತಾ.ಪಂ. ಸಭಾಂಗಣದಲ್ಲಿ ನಡೆಯಿತು.
ಕೆಲವು ರೆಸಾರ್ಟ್ಗಳು ತ್ಯಾಜ್ಯ ವಸ್ತುಗಳನ್ನು ಹೊಳೆಗಳ ಮೂಲಕ ಬಿಡುತ್ತಿರುವ ಪುಕಾರುಗಳು ಸಲ್ಲಿಕೆಯಾಗಿವೆ. ಪಂಚಾಯಿತಿಯಿಂದ ಅನುಮತಿ ಪಡೆದಿರುವದಕ್ಕಿಂತ ಹೆಚ್ಚು ವಿಸ್ತೀರ್ಣ ಜಾಗವನ್ನು ಅತಿಕ್ರಮಿಸಿಕೊಂಡಿರುವ ಪ್ರಕರಣಗೂ ಇವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹತ್ತು ದಿನದೊಳಗೆ ನೀಡಬೇಕೆಂದು ಶಾಸಕರು, ಪಿಡಿಒಗಳಿಗೆ ಸೂಚನೆ ನೀಡಿದರು.(ಮೊದಲ ಪುಟದಿಂದ) ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದರೆ ಮಾತ್ರ ಗ್ರಾಮಗಳ ಅಭಿವೃದ್ದಿ ಸಾಧ್ಯ. ಆದರೆ ಬಹುತೇಕ ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡುತ್ತಿಲ್ಲ. ಹಲವರ ಮೇಲೆ ದೂರುಗಳು ಇವೆ. ಎಲ್ಲಾ ಅಧಿಕಾರಿಗಳು ಮಾರ್ಚ್ ತಿಂಗಳ ಒಳಗಾಗಿ ನಿಗದಿತ ಯೋಜನೆಗಳನ್ನು ಮುಗಿಸಬೇಕು ಎಂದು ಸೂಚಿಸಿದರು.
ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಜನಪ್ರತಿನಿಧಿಗಳ ಮೇಲೆ ಅನವಶ್ಯಕವಾಗಿ ಜಾತಿನಿಂದನೆ ದೂರು ದಾಖಲಿಸಿದ್ದಾರೆ. ಆರೋಗ್ಯ ಕೇಂದ್ರಕ್ಕೆ ತೆರಳದೆ ತಮ್ಮ ವಸತಿ ಗೃಹದಲಿಯೇ ಔಷಧಿ ನೀಡುತ್ತಾರೆ. ಸಾರ್ವಜನಿಕ ರಿಂದ ಹಣಕ್ಕೆ ಬೇಡಿಕೆ ಇಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿರುವದರಿಂದ ಅವರನ್ನು ವರ್ಗಾಯಿಸಬೇಕೆಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್ ಆಗ್ರಹಿಸಿದರು. ಈ ಬಗ್ಗೆ ಸ್ಪಂದಿಸಿದ ಶಾಸಕರು ತಕ್ಷಣವೇ ದೂರವಾಣಿ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿ ಯನ್ನು ಸಂರ್ಪಕಿಸಿ, ಮಾದಾಪುರದ ವೈದ್ಯರನ್ನು ಜಿಲ್ಲೆಯಿಂದ ವರ್ಗಾಯಿಸಲು ಸೂಚನೆ ನೀಡಿದರು.
ತಾಲೂಕಿನ ಮಾದಾಪುರ, ಸುಂಟಿಕೊಪ್ಪ ಸೇರಿದಂತೆ ಸೋಮವಾರಪೇಟೆ ಅಂಬೇಡ್ಕರ್ ವಸತಿ ಶಾಲೆಯ ಸಮೀಪ ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಪುಕಾರುಗಳು ಬಂದಿವೆ. ಕೆಲವು ಯುವಕರು ಬಸ್ ನಿಲ್ದಾಣ, ಶಾಲಾ ಕಾಲೇಜುಗಳು ಬಿಡುವ ಸಮಯದಲ್ಲಿ ದಾರಿಹೋಕರಂತೆ ಅಲೆಯುತ್ತಿರುತಾರೆ. ದ್ವಿಚಕ್ರ ವಾಹನದಲ್ಲಿ ಅತೀ ವೇಗದಲ್ಲಿ ತೆರಳುತ್ತಿದ್ದು, ಪೋಲೀಸ್ ಇಲಾಖೆ ಈ ಬಗ್ಗೆ ನಿಗಾ ವಹಿಸಬೇಕೆಂದು ಪೋಲೀಸ್ ಉಪಅಧೀಕ್ಷಕ ಮುರಳೀಧರ್ ಅವರಿಗೆ ರಂಜನ್ ಸೂಚಿಸಿದರು.
ತಾಲೂಕಿನಲ್ಲಿ 15 ಅಂಗನವಾಡಿ ಕೇಂದ್ರದ ದುರಸ್ತಿಗಾಗಿ 24 ಲಕ್ಷ ರೂ. ಬಿಡುಗಡೆಯಾಗಿದೆ. ಕುಶಾಲನಗರ, ನೆಲ್ಲಿಹುದಿಕೇರಿ ಮತ್ತು ಚೆÀಟ್ಟಳ್ಳಿಯಲ್ಲಿ ಶ್ರೀಘ್ರದಲ್ಲಿ ಕಟ್ಟಡ ದುರಸ್ತಿ ಮಾಡಬೇಕಾಗಿದೆ ಎಂದು ಶಿಶು ಅಭಿವೃದ್ದಿ ಯೋಜನೆ ಇಲಾಖೆಯ ಅಧಿಕಾರಿಗಳಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ನಿರ್ದೇಶನವಿತ್ತರು.
ತಾಲೂಕಿನ ಅಭ್ಯತ್ಮಂಗಲದ ದೇವರಕಾಡು 30 ಏಕರೆಯಷ್ಟು ಜಾಗವನ್ನು ಓರ್ವ ಪ್ರಭಾವೀ ವ್ಯಕ್ತಿ ಒತ್ತುವರಿ ಮಾಡಿದ್ದಾರೆ. ತಕ್ಷಣವೇ ತೆರವುಗೊಳಿಸಬೇಕೆಂದು ಶಾಸಕರು ಕುಶಾಲನಗರ ಅರಣ್ಯ ವಲಯಾಧಿಕಾರಿ ಗಳಿಗೆ ಸೂಚನೆ ನೀಡಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ತಂಗಮ್ಮ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುನಿಲ್, ತಹಶೀಲ್ದಾರ್ ಗೋವಿಂದರಾಜು ಉಪಸ್ಥಿತರಿದ್ದರು.