ಶ್ರೀಮಂಗಲ, ಸೆ. 24: ನಿನ್ನೆ ಸಂಜೆ ಕುಟ್ಟ-ಶ್ರೀಮಂಗಲ ನಡುವೆ ಪೂಜೆಕಲ್ಲ್ನಲ್ಲಿ ರಸ್ತೆ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾನೆ. ಪೂಜೆಕಲ್ಲ್ ನಿವಾಸಿ ಗಣೇಶ (27) ಮೃತಪಟ್ಟ ಯುವಕನಾಗಿದ್ದಾನೆ. ನಿನ್ನೆ ಸಂಜೆ ಶ್ರೀಮಂಗಲದಿಂದ ಕುಟ್ಟ ಕಡೆಗೆ ಬೈಕಿನಲ್ಲಿ ಗಣೇಶ್ ಹಾಗೂ ಸ್ನೇಹಿತ ಅಕ್ಷಯ್ ತೆರಳುತ್ತಿದ್ದ ಸಂದರ್ಭ ಕುಟ್ಟದಿಂದ ಶ್ರೀಮಂಗಲಕ್ಕೆ ಹೋಗುತ್ತಿದ್ದ ಕುರ್ಚಿ ಗ್ರಾಮದ ಕೆ.ಕೆ. ಸಂಜು ಅವರು ಚಾಲಿಸುತ್ತಿದ್ದ ಜೀಪು ನಡುವೆ ಪೂಜೆಕಲ್ಲ್ ಎಂಬಲ್ಲಿ ಅಪಘಾತ ಸಂಭವಿಸಿತ್ತು. ಈ ಸಂದರ್ಭ ಗಣೇಶ್ ಅವರಿಗೆ ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಹಿಂಬದಿ ಸವಾರ ಕುಟ್ಟ ನಿವಾಸಿ ಮಣಿಕಂಠ ಅವರ ಪುತ್ರ ಅಕ್ಷಯ್ (22) ಅವರಿಗೂ ಗಂಭೀರ ಗಾಯಗಳಾಗಿದೆ. ಅಪಘಾತದ ನಂತರ ಕುಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ಮಾನಂದವಾಡಿಯ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮಾನಂದವಾಡಿ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆಯ ಸೌಲಭ್ಯ ಇಲ್ಲದೇ ಇರುವ ಕಾರಣ ಮತ್ತೆ ಮೈಸೂರು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗಣೇಶ್ ಮೃತಪಟ್ಟರು. ಗಾಯಾಳು ಅಕ್ಷಯ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.