ಮಡಿಕೇರಿ, ಸೆ. 24: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಮಡಿಕೇರಿಯ ಶ್ರೀ ರಾಜೇಶ್ವರಿ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಅಂತರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟ ನಡೆಯಿತು.

3 ದಿನಗಳ ಕಾಲ ಪಂದ್ಯಾವಳಿಗಳು ನಡೆದಿದ್ದು, ಇಂದು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡಾಕೂಟಗಳು ನಡೆದವು. ತಾಲೂಕಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಶಿಸ್ತುಬದ್ದವಾಗಿ ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.

ಮಡಿಕೇರಿಯ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗೋವಿಂದಸ್ವಾಮಿ ಕ್ರೀಡಾಜ್ಯೋತಿ ಬೆಳಗಿಸಿ, ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಗೆ ವಯಸ್ಸಿನ ಅಂತರವಿಲ್ಲ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವದರ ಜೊತೆಗೆ ವಿದ್ಯಾಭ್ಯಾಸದಲ್ಲೂ ಮುಂದಿರಬೇಕು ಎಂದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿ, ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗಿದೆ. ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ನಡೆದ ಕ್ರೀಡಾಕೂಟಗಳಲ್ಲಿ ಅದೆಷ್ಟೋ ಕ್ರೀಡಾಪಟುಗಳು ಸ್ಪರ್ಧಿಸಿ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡಿದ್ದಾರೆ. ‘ಯೂನಿಟಿ ಇಸ್ ದಿ ಸ್ಟ್ರೆಂತ್, ಸ್ಪೋಟ್ರ್ಸ್ ಇಸ್ ದಿ ವೇ ಆಫ್ ಲೈಫ್’ ಎಂಬ ಮಾತನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಮುನ್ನಡೆದರೆ ಯಶಸ್ಸು ಕಾಣಬಹುದು ಎಂದು ಸಲಹೆ ನೀಡಿದರು.

ಇದೇ ಸಂದರ್ಭ ಅಂತರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅಥ್ಲೆಟಿಕ್ಸ್ ಪಂದ್ಯಾವಳಿಗಳು ನಡೆದವು. ಕಾರ್ಯಕ್ರಮದಲ್ಲಿ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ದಾಕ್ಷಾಯಿಣಿ ವಾಸುದೇವ್, ಮ್ಯಾನೇಜಿಂಗ್ ಟ್ರಸ್ಟಿ ಸಚಿನ್ ವಾಸುದೇವ್, ನಿರ್ದೇಶಕ ಹೆಚ್.ಎಸ್ ದೇವರಾಜ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಕೆ.ಎಂ. ಕುಶಾಲಪ್ಪ, ಸಂಸ್ಥೆಯ ಪ್ರಾಂಶುಪಾಲ ಮಂದಣ್ಣ ಪಿ.ಕೆ. ಮತ್ತಿತರರು ಇದ್ದರು.