ಸೋಮವಾರಪೇಟೆ, ಸೆ. 24: ದೇಶದ ಐಕ್ಯತೆಯನ್ನು ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಜಮ್ಮು-ಕಾಶ್ಮೀರದ ಆರ್ಟಿಕಲ್ 370ನ್ನು ರದ್ದುಗೊಳಿಸಿರುವದು ಕ್ರಾಂತಿಕಾರಕ ಕ್ರಮ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಅಭಿಮತ ವ್ಯಕ್ತಪಡಿಸಿದರು.
ರಾಷ್ಟ್ರೀಯ ಐಕ್ಯತಾ ಅಭಿಯಾನದ ವತಿಯಿಂದ ಇಲ್ಲಿನ ಕೊಡವ ಸಮಾಜ ದಲ್ಲಿ ಆಯೋಜಿಸಲಾಗಿದ್ದ ‘ಒಂದು ದೇಶ-ಒಂದು ಸಂವಿಧಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಕೇಂದ್ರ ಸರ್ಕಾರ ಯಶಸ್ಸಾಗಿದೆ. ಅಸಂಖ್ಯಾತ ಮಂದಿಯ ಪರಿಶ್ರಮ ದಿಂದ ಇಂದು ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರ್ಪಡೆಯಾಗಿದೆ. ಒಂದು ದೇಶದಲ್ಲಿ ಒಂದು ಸಂವಿಧಾನ ಇರಬೇಕೆಂಬದು ಬಿಜೆಪಿ ನಿಲುವು. ಚುನಾವಣೆ ಸಂದರ್ಭ ಬಿಜೆಪಿ ನೀಡಿದ್ದ ಭರವಸೆ ಈ ಮೂಲಕ ಈಡೇರಿಸಿದೆ ಎಂದರು.
ಈ ಹಿಂದೆ ಇದ್ದ ಎಲ್ಲಾ ಒಕ್ಕೂಟ ಗಳನ್ನು ವಿಲೀನಗೊಳಿಸುವ ಮೂಲಕ ವೈವಿಧ್ಯತೆಯಲ್ಲಿ ಏಕತೆಯ ದೇಶವನ್ನು ನಿರ್ಮಿಸಲಾಗಿದೆ. ಭಾರತದ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅಳವಡಿಕೆಯಿಂದಾಗಿ ಅಸಮಾನತೆ ಯನ್ನು ಹಾಗೆಯೇ ಉಳಿಸಿಕೊಳ್ಳ ಲಾಗಿತ್ತು. ಇದನ್ನು ಕೇಂದ್ರ ಸರ್ಕಾರ ಹೋಗಲಾಡಿಸುವ ಮೂಲಕ ಐಕ್ಯತೆಯ ದೇಶ ನಿರ್ಮಿಸುವ ಕೆಲಸಕ್ಕೆ ನಾಂದಿ ಹಾಡಿದೆ ಎಂದರು.
ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯೆ ದೇಶದ ಶೇ. 1 ರಷ್ಟಿದ್ದರೂ ಸಹ, ದೇಶದ ಒಟ್ಟು ಬಜೆಟ್ನ ಶೇ. 10ರಷ್ಟು ಅನುದಾನವನ್ನು ಅಲ್ಲಿಗೆ ವಿನಿಯೋಗಿಸಲಾಗುತ್ತಿತ್ತು. ಆದರೂ ನಮ್ಮ ದೇಶದ ಸೈನಿಕರಿಗೆ ಕಲ್ಲು ಹೊಡೆಯುವದು, ಸೈನಿಕರ ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯ, ಮತಾಂತರ, ಅಕ್ರಮ ಶಸ್ತ್ರಾಸ್ತ್ರ ಸಾಗಾಟ, ಬಾಂಬ್ ಸ್ಪೋಟ, ಭಯೋತ್ಪಾದನೆಯನ್ನು ಬಿತ್ತುವ ಕೆಲಸಗಳು ನಿಂತಿರಲಿಲ್ಲ ಎಂದು ತೇಜಸ್ವಿನಿ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.
ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶಗಳೂ ಸಹ ಇಲ್ಲಿಗೆ ಅನ್ವಯಿಸುತ್ತಿರಲಿಲ್ಲ. ದೇಶದ ಇತರ ರಾಜ್ಯಗಳಿಂದ ಆರ್ಥಿಕ ಸಂಪನ್ಮೂಲವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಹರಿಸಲಾಗುತ್ತಿದ್ದರೂ ಸಹ ದೇಶಕ್ಕೆ ಪೂರಕವಾದ ಯಾವ ಕೆಲಸಗಳೂ ಅಲ್ಲಿ ನಡೆಯುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಕೇಂದ್ರ ಸರ್ಕಾರ ಆರ್ಟಿಕಲ್ 370ಯನ್ನು ರದ್ದುಗೊಳಿಸಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕಾಶ್ಮೀರದಲ್ಲಿ ಕಲಂ 370 ರದ್ದತಿಯಿಂದಾಗಿ ಅಲ್ಲಿ ಆಸ್ತಿ ಖರೀದಿ, ಉದ್ಯೋಗ, ವೈವಾಹಿಕ ಸ್ಥಿತಿಗತಿ ಸುಧಾರಿಸಲಿದೆ. ಕೇಂದ್ರ ಸರ್ಕಾರದ ಮೋದಿ ಮತ್ತು ಅಮಿತ್ ಷಾ ಅವರು ಆರ್ಟಿಕಲ್ 370ನ್ನು ತೆಗೆಯುವ ಬಗ್ಗೆ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. ಪ್ರತ್ಯೇಕತಾವಾದಿಗಳ ಸದ್ದು ಅಡಗಿಸುವ ಮೂಲಕ ದೇಶದ ಐಕ್ಯತೆ ಯನ್ನು ಎತ್ತಿ ಹಿಡಿದಿದ್ದಾರೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ರಾಷ್ಟ್ರೀಯ ಐಕ್ಯತಾ ಅಭಿಯಾನದ ಸಂಚಾಲಕ ಜಪ್ಪು ಅಚ್ಚಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾಜೀ ಎಂಎಲ್ಸಿ ಎಸ್.ಜಿ.ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಸರೋಜಮ್ಮ, ದೀಪಕ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ತಂಗಮ್ಮ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿ.ಕೆ. ಲೋಕೇಶ್, ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ ಸೇರಿದಂತೆ ಇತರರು ಭಾಗವಹಿಸಿದ್ದರು.