ಒಡೆಯನಪುರ, ಸೆ. 24: ಸಮಿಪದ ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷ ಎ.ಎಂ. ಆನಂದ್ ಅಧ್ಯಕ್ಷತೆಯಲ್ಲಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರು ಪ್ರೌಢಶಾಲಾ ವಿಭಾಗ ಮತ್ತು ಪದವಿ ಪೂರ್ವ ಕಾಲೇಜು ವಿಭಾಗ ಹಲವಾರು ವರ್ಷಗಳ ಹಿಂದೆಯೇ ಸರಕಾರಕ್ಕೆ ಅನುದಾನಿತಗೊಂಡಿದೆ, ಆದರೆ ಪ್ರೌಢ ಮತ್ತು ಪ.ಪೂ. ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದ್ದು, ಆಡಳಿತ ಮಂಡಳಿ ಹಿಂದಿನಂತೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದರು. ಸದಸ್ಯ ದೇವರಾಜ್ ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಹೆಚ್ಚಿಸಲು ಮತ್ತು ಹತ್ತನೆ ತರಗತಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಿದ ವಿದ್ಯಾರ್ಥಿ ಗಳನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸುವದು ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉನ್ನತ ಅಂಕಗಳಿಸಲು ವಿಶೇಷವಾಗಿ ತಯಾರು ಮಾಡುವ ಶಿಕ್ಷಕರನ್ನೂ ಸನ್ಮಾನಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವದರ ಜೊತೆಯಲ್ಲಿ ಇತರ ವಿದ್ಯಾಸಂಸ್ಥೆಗಳಿಗೆ ಮಾದರಿ ಯಾಗುತ್ತದೆ ಎಂದು ಸಲಹೆ ನೀಡಿದರು. ಈ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಸದಸ್ಯ ಮಹಮದ್ ಗೌಸ್ ಹಾಜರಾತಿ ಪ್ರಮಾಣ ಕುಸಿಯಲು ಕನ್ನಡ ಮಾಧ್ಯಮ ಕಾರಣವಾಗಿದೆ. ಈ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯನ್ನಾಗಿ ಮಾಡುವದು, ವಿದ್ಯಾರ್ಥಿಗಳಿಗೆ ಶಾಲಾ ವಾಹನದ ವ್ಯವಸ್ಥೆ, ಗುಣಮಟ್ಟದ ಶಿಕ್ಷಣದ ಸೌಲಭ್ಯ ಮುಂತಾದ ಸವಲತ್ತುಗಳನ್ನು ಕೊಟ್ಟರೆ ಮಾತ್ರ ವಿದ್ಯಾಸಂಸ್ಥೆ ಪ್ರಗತಿ ಹೊಂದುತ್ತದೆ ಎಂದು ಸಲಹೆ ನೀಡಿದರು. ಪ್ರತಿಕ್ರಿಯಿಸಿದ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಎಂ. ಆನಂದ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಮತ್ತು ಸಕಲ ಸೌಲಭ್ಯ ಒದಗಿಸಿಕೊಡಲು ಸದ್ಯಕ್ಕೆ ವಿದ್ಯಾಸಂಸ್ಥೆಯಲ್ಲಿ ಆರ್ಥಿಕ ಮುಗ್ಗಟು ಕೊರತೆ ಎದುರಿಸುತ್ತಿದ್ದು, ಈ ಬಗ್ಗೆ ವಿದ್ಯಾಸಂಸ್ಥೆಯನ್ನು ಹಂತಹಂತವಾಗಿ ಪ್ರಗತಿಯತ್ತ ತರಲು ಆಡಳಿತ ಮಂಡಳಿ ಕ್ರಮಕೈಗೊಳ್ಳುತ್ತದೆ ಎಂದರು.

ಸಭೆಯಲ್ಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಎಚ್.ಪಿ. ಶೇಷಾದ್ರಿ, ಗೌರವ ಕಾರ್ಯದರ್ಶಿ ಜಗನ್‍ಪಾಲ್, ನಿರ್ದೇಶಕರುಗಳಾದ ಎನ್.ಕೆ. ಅಪ್ಪಸ್ವಾಮಿ, ಎಂ.ಯು. ಮಹಮ್ಮದ್ ಪಾಷ, ಮಹಮದ್ ಗೌಸ್, ಎನ್.ಬಿ. ನಾಗಪ್ಪ, ಬಿ.ಟಿ. ರಂಗಸ್ವಾಮಿ, ಕೆ.ಸಿ. ಉತ್ತಪ್ಪ, ಕೆ.ಪಿ. ಪುಷ್ಪಾ, ಗಾಯತ್ರಿ ತಮ್ಮಯ್ಯ ಪ.ಪೂ. ಕಾಲೇಜು ಪ್ರಾಂಶುಪಾಲ ಎಸ್.ಜೆ. ಅಶೋಕ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಸ್.ಜೆ. ಅಶೋಕ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಪಿ. ನರಸಿಂಹಮೂರ್ತಿ ಮುಂತಾದವರು ಇದ್ದರು.

- ವಿ.ಸಿ. ಸುರೇಶ್ ಒಡೆಯನಪುರ