ಕೂಡಿಗೆ, ಸೆ. 24: ಜಿಲ್ಲೆಯಲ್ಲಿರುವ 71 ಸಹಕಾರ ಸಂಘಗಳು ಇದೀಗ ಪ್ರಗತಿಯತ್ತ ಸಾಗುತ್ತಿದ್ದು, ತನ್ನದೇ ಬಂಡವಾಳದ ಮುಖೇನ ವಿವಿಧ ಅಭಿವೃದ್ಧಿಯ ಕಾರ್ಯಗಳತ್ತ ಗಮನಹರಿಸಿ ಪ್ರಗತಿಯತ್ತ ಮುನ್ನುಗ್ಗುತ್ತಿವೆ. ಇವುಗಳ ಅಭಿವೃದ್ಧಿಗೆ ಸದಸ್ಯರುಗಳ ಪಾತ್ರವು ಮುಖ್ಯವಾಗಿರುತ್ತದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಪಿ. ಗಣಪತಿ ಹೇಳಿದರು.
ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ನವೀಕೃತ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕೇಂದ್ರ ಬ್ಯಾಂಕ್ ಜಿಲ್ಲೆಯ ಎಲ್ಲಾ ಸಹಕಾರ ಬ್ಯಾಂಕುಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಸಹಕರಿಸುತ್ತಿದೆ. ರೈತರಿಗೆ ಬರಬೇಕಾದ ಸಾಲ ಮನ್ನ ವಿಚಾರವಾಗಿ ಈಗಾಗಲೇ ಹೆಚ್ಚಿನ ಹಣವು ರಾಜ್ಯ ಸರಕಾರದಿಂದ ಬಿಡುಗಡೆಗೊಂಡು ಹಂತಹಂತವಾಗಿ ರೈತರ ಖಾತೆಗಳಿಗೆ ಸೇರುತ್ತಿದೆ. ಇನ್ನುಳಿದ 9375 ಜನರಿಗೆ ಬಾಕಿಯಿದ್ದು, ಸದ್ಯದಲ್ಲೇ ಈ ಹಣವು ಆಯಾಯ ಸದಸ್ಯರುಗಳ ಖಾತೆಗೆ ಜಮಾ ಆಗಲಿದೆ. ಈ ವಿಚಾರವಾಗಿ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ರೈತರಿಗೆ ಬರಬೇಕಾದ ಹಣವು ಸದ್ಯದಲ್ಲೇ ಬರಲಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಇರುವ ಎಲ್ಲ ಸಹಕಾರ ಸಂಘಗಳು ಏಕಮುಖ ಲೆಕ್ಕ ಪದ್ಧತಿ ಅನುಷ್ಠಾನಗೊಳಿಸುವಲ್ಲಿ ಇದರ ಯೋಜನೆಯನ್ನು ತಾಂತ್ರಿಕವಾಗಿ ಕಾರ್ಯರೂಪಗೊಳಿಸಲಾಗುವದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಮಾತನಾಡಿ, ದುಡಿಯುವ ಬಂಡವಾಳದ ಮುಖೇನ ಹಣ ಸಂಗ್ರಹಿಸಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಮೂಲಕ ಸಂಘದ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿ ದುಡಿಯಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಸಹಕಾರ ಸಂಘಗಳು ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಮನಾಗುವ ಛಾಪನ್ನು ಮೂಡಿಸಿವೆ. ಅದರಂತೆ ಕೂಡಿಗೆಯ ಸಹಕಾರ ಸಂಘವು ಗಣಕೀಕೃತದೊಂದಿಗೆ ಎಲ್ಲ ರೀತಿಯ ಯಾಂತ್ರಿಕ ಸೇವೆ, ಸೌಲಭ್ಯಗಳು ನೀಡಲು ಸಿದ್ಧವಾಗಿದೆ ಎಂದರು.
ಕೂಡುಮಂಗಳೂರು ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಕೆ. ಹೇಮಂತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಸದಸ್ಯ ಗಣೇಶ್, ಕೂಡಿಗೆ ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ, ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಟಿ.ಪಿ. ಹಮೀದ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.
ಈ ಸಂದರ್ಭ ಸ್ಥಳೀಯವಾಗಿ ಸೇವೆ ಸಲ್ಲಿಸಿದ ಹಾಗೂ ಹಿಂದಿನ ಅಧ್ಯಕ್ಷರಾಗಿ ಸಂಘಕ್ಕೆ ಸೇವೆ ಸಲ್ಲಿಸಿದ ಅಧ್ಯಕ್ಷರುಗಳನ್ನು ಗೌರವಿಸಲಾಯಿತು.
ಸ್ಥಳೀಯ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ಡಿ.ಸಿ. ರವಿಚಂದ್ರ, ಮಾಜಿ ಅಧ್ಯಕ್ಷರುಗಳಾದ ಎಂ.ಬಿ. ಜಯಂತ್, ಎಂ.ಪಿ. ಕೃಷ್ಣಪ್ಪ, ಕೆ.ಆರ್. ರಂಗಸ್ವಾಮಿ, ಜಗದೀಶ್, ಕೆ.ಕೆ. ಭೋಗಪ್ಪ, ತಮ್ಮಣ್ಣೇಗೌಡ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಮೇಲ್ವಿಚಾರಕಿ ಮೀನಾ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಶಿಕುಮಾರ್ ಉಪಸ್ಥಿತರಿದ್ದರು. ಕೆ. ಭಾರಧ್ವಾಜ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಎನ್. ರಾಜಾರಾವ್ ಸ್ವಾಗತಿಸಿ, ವಂದಿಸಿದರು.