ಗೋಣಿಕೊಪ್ಪ ವರದಿ, ಸೆ. 24: ಗೋಣಿಕೊಪ್ಪ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 1.68 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಚಿಟ್ಟಿಯಪ್ಪ ತಿಳಿಸಿದ್ದಾರೆ.
ಸಂಘದ ಸಭಾಂಗಣದಲ್ಲಿ 65ನೇ ಮಹಾಸಭೆಯಲ್ಲಿ ಮಾಹಿತಿ ನೀಡಿದ ಅವರು, ಸಂಘದ ಒಟ್ಟು ವ್ಯವಹಾರ ರೂ. 224 ಕೋಟಿಗಳಾಗಿದ್ದು. ಸಂಘದ ದುಡಿಯುವ ಬಂಡವಾಳವು ರೂ. 26 ಕೋಟಿಗಳಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ 14751 ಚೀಲ ಕಾಫಿ ಠೇವಣಿಯಾಗಿ ಸಂಗ್ರಹಿಸಿ ಶೇ. 10 ಬಡ್ಡಿ ದರದಲ್ಲಿ ರೂ. 4.88 ಕೋಟಿ ಕಾಫಿ ಠೇವಣಿ ಮುಂಗಡ ಸಾಲ ನೀಡಲಾಗಿದ್ದು, ಸದಸ್ಯರಿಗೆ ಶೇ. 25 ರಷ್ಟು ಡೆವಿಡೆಂಟ್ ನೀಡಲಾಗಿದೆ ಎಂದರು.
ಸಂಘದ ಸದಸ್ಯರುಗಳಿಗೆ ರೂ. 40.44 ಕೋಟಿ ಸಾಲ ನೀಡಲಾಗಿದೆ. ಅದರಲ್ಲಿ ರೂ. 37.74 ಕೋಟಿ ವಸೂಲಾತಿ ಮಾಡಲಾಗಿದೆ. ಕೃಷಿ ಸಾಲದ ಪ್ರಸಕ್ತ ಸಾಲಿನಲ್ಲಿ ಶೇ. 99.9 ಸಾಲ ವಸೂಲಾತಿ ಆಗಿದೆ. ರಾಜ್ಯ ಸರ್ಕಾರ 20.6.2017 ರ ಹೊರಬಾಕಿ ಸಾಲಕ್ಕೆ ರೂ. 50,000 ಸಾಲ ಮನ್ನಾ ಘೋಷಣೆ ಮಾಡಿದೆ. ಒಟ್ಟು 558 ರೈತ ಸದಸ್ಯರುಗಳ ಪೈಕಿ 523 ಸದಸ್ಯರ ರೂ. 2.58 ಕೋಟಿಗಳನ್ನು ನೇರವಾಗಿ ಯಾವುದೇ ರೀತಿಯಲ್ಲಿ ಕಡಿತ ಮಾಡದೆ ರೈತರುಗಳ ಸಂಚಯ ಖಾತೆಗೆ ನೀಡಲಾಗಿದೆ. ರಾಜ್ಯ ಸರ್ಕಾರವು ಎರಡನೇಯ ಬಾರಿ 10.7.2018 ಕ್ಕೆ ಹೊರಬಾಕಿ ಇರುವ ಸಾಲಗಳಿಗೆ ರೂ. 1 ಲಕ್ಷ ದವರೆಗೆ ಸಾಲ ಮನ್ನಾ ಮಾಡಿದ್ದು, ಸಾಲ ಮನ್ನಾ ಹಣವು ನೇರವಾಗಿ ಅಪೆಕ್ಸ್ ಬ್ಯಾಂಕ್‍ನಿಂದ ರೈತರ ಖಾತೆಗಳಿಗೆ ಸಂದಾಯವಾಗಿರುವದರಿಂದ ರೈತರು ತಮ್ಮ ರುಪೇ ಕಾರ್ಡ್ ಖಾತೆಗಳನ್ನು ಪರಿಶೀಲಿಸಿಕೊಳ್ಳುವಂತೆ ತಿಳಿಸಿದರು.
2018-19ನೇ ಸಾಲಿನಲ್ಲಿ ಕೊಡಗಿನ ಮಡಿಕೇರಿ ತಾಲೂಕಿನಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ನಲುಗಿದ ಕೊಡಗಿನ ಸಂತ್ರಸ್ತ ಕುಟುಂಬಗಳಿಗೆ ಸಂಘದ 192 ಸದಸ್ಯರಿಂದ ರೂ. 1.68 ಲಕ್ಷ ಹಾಗೂ ಸಮುದಾಯಿಕ ಪ್ರಯೋಜನ ನಿಧಿಯಿಂದ ರೂ. 1.36 ಲಕ್ಷ ಒಟ್ಟಾಗಿ 3.05 ಲಕ್ಷಗಳನ್ನು 17 ಕುಟುಂಬಗಳಿಗೆ ತಲಾ ರೂ. 15 ಸಾವಿರದಂತೆ, ಒಂದು ಕುಟುಂಬಕ್ಕೆ 30 ಸಾವಿರ ಹಾಗೂ 2 ವಿದ್ಯಾರ್ಥಿಗಳಿಗೆ ತಲಾ 10 ಸಾವಿರದಂತೆ ಚೆಕ್ ಮುಖಾಂತರ ನೀಡಲಾಗಿದೆ. ಕಾವೇರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗೆ ರೂ. 10 ಸಾವಿರ ನೆರವು ನೀಡಲಾಗಿದೆ ಎಂದರು.
ಸಂಘದ ಮುಂಬಾಗದಲ್ಲಿರುವ 17.50 ಸೆಂಟ್ ಜಾಗವನ್ನು ಕುಪ್ಪಂಡ ರಂಜಿತ್ ಹಾಗೂ ಕುಪ್ಪಂಡ ಕಾರ್ಯಪ್ಪ ಅವರುಗಳಿಂದ ಮಾರುಕಟ್ಟೆ ದರಕ್ಕೆ ಅನುಗುಣಕ್ಕೆ ರೂ. 2.12 ಕೋಟಿ ಪಾವತಿಸಿ ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸುಸಜ್ಜಿತವಾದ ಸಂಘದ ಕಟ್ಟಡವನ್ನು ನಿರ್ಮಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು.
ಉಪಾಧ್ಯಕ್ಷ ಕೆ.ಎನ್ ಸುಬ್ರಮಣಿ, ನಿರ್ದೇಶಕರುಗಳಾದ ಜಮ್ಮಡ ಸಿ. ಮೋಹನ್, ಬೆಲ್ಲತಂಡ ಸಿ. ಮಾದಯ್ಯ, ಚೆಪ್ಪುಡೀರ ಟಿ ಗಣಪತಿ, ಕಾಡ್ಯಮಾಡ ಡಿ. ದೇವಯ್ಯ, ವೇದಪಂಡ ಬಿ. ಕಿರಣ್, ಪಿ.ವಿ. ಶೋಭಿತ್, ಕೊಕ್ಕಲೆಮಾಡ ಪಾರ್ವತಿ, ಜಮ್ಮಡ ಸೌಮ್ಯ, ಹೆಚ್.ಎಸ್. ಗಣೇಶ್, ವೈ.ವೈ. ಗಪ್ಪು, ಕುಲ್ಲಚಂಡ ಗಣಪತಿ ಹಾಗೂ ಸಿಇಒ ಬಿ.ಕೆ. ಚಂದ್ರಶೇಖರ್ ರೈ ಇದ್ದರು.
- ಸುದ್ದಿಪುತ್ರ