ಮಡಿಕೇರಿ, ಸೆ. 24: ತೈಲ, ಬಿಡಿಭಾಗಗಳ ಬೆಲೆ ಏರಿಕೆ, ಪೈಪೋಟಿ ಮಾರ್ಗ ಬದಲಾವಣೆ ನಡುವೆ ಖಾಸಗಿ ಬಸ್ ವಲಯ ಸಂಕಷ್ಟ ಎದುರಿಸುವಂತಾಗಿದೆ. ಬಹುತೇಕ ಬಸ್‍ಗಳು ನಷ್ಟದಲ್ಲಿ ಸಂಚರಿಸುತ್ತಿದ್ದರೆ, ಅನೇಕ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿವೆ. ಭವಿಷ್ಯದಲ್ಲಿ ಖಾಸಗಿ ಬಸ್‍ಗಳ ಸೇವೆ ನಿಂತು ಹೋಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಅದೆಷ್ಟೋ ವರ್ಷಗಳಿಂದ ಕುಗ್ರಾಮಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬಸ್‍ಗಳು ಅತ್ಯಮೂಲ್ಯ ಸೇವೆ ಸಲ್ಲಿಸುತ್ತಾ ಬರುತ್ತಿವೆ. ರಸ್ತೆಗಳು ಸರಿ ಇಲ್ಲದಿದ್ದರೂ, ಕಿರಿದಾದ ರಸ್ತೆಯಾದರೂ ಕಷ್ಟವಾದರೂ ಸೇವೆ ಮುಂದುವರಿಸಿಕೊಂಡು ಬರುತ್ತಿವೆ. ಖಾಸಗಿ ಬಸ್‍ಗಳ ಈ ಸೇವೆಯಿಂದ ವಿದ್ಯಾರ್ಥಿಗಳು, ಕಚೇರಿ ಕೆಲಸಗಳಿಗೆ ಬರುವವರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಆದರೆ, ಬರಬರುತ್ತಾ ಗ್ರಾಮಾಂತರ ಪ್ರದೇಶಗಳಿಗೂ ಸಾರಿಗೆ ಸಂಸ್ಥೆಯ ಬಸ್‍ಗಳು ಸಂಚಾರ ಆರಂಭವಾದ ಬಳಿಕ ಪೈಪೋಟಿ ಕಂಡು ಬಂದು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಾಣುವಂತಾಗಿದೆ. ಇದರೊಂದಿಗೆ ತೈಲ ಬೆಲೆ ಏರಿಕೆ, ಬಿಡಿಭಾಗಗಳ ಮೇಲಿನ ತೆರಿಗೆ ಮುಂತಾದವುಗಳಿಂದ ಬಸ್‍ಗಳ ನಿರ್ವಹಣೆ ಮಾಡುವದೇ ಕ್ಲಿಷ್ಟಕರವಾಗಿದೆ. ಈ ನಡುವೆ ಖಾಸಗಿ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿದ್ದು, ಬಸ್‍ನಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದೆ. ಜೊತೆಗೆ ಸಮಸ್ಯೆಗಳ ನಡುವೆ ಬಸ್‍ಗಳನ್ನು ಓಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಲ್ದಾಣಗಳ ಸಮಸ್ಯೆ : ಮಡಿಕೇರಿ ಸೇರಿದಂತೆ ಕೆಲವು ಕಡೆಗಳಲ್ಲಿ ಬಸ್ ನಿಲ್ದಾಣ ಹಾಗೂ ಮಾರ್ಗದ ಸಮಸ್ಯೆಗಳು ಎದುರಾಗಿವೆ.
(ಮೊದಲ ಪುಟದಿಂದ) ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ನೂತನ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದರೂ ಸಮರ್ಪಕವಾದ ವ್ಯವಸ್ಥೆ ಇಲ್ಲದೆ ನಲುಗುತ್ತಿದೆ. ಬಸ್ ನಿಲ್ದಾಣ ದೂರವಾದ ಕಾರಣ ಪ್ರಯಾಣಿಕರು ಕೂಡ ತಂಗುದಾಣಕ್ಕೆ ಬರುತ್ತಿಲ್ಲ. ಕಾಲೇಜು ವಿದ್ಯಾರ್ಥಿಗಳು ಮಾತ್ರ ಹೊಸ ತಂಗುದಾಣಕ್ಕೆ ಬರುತ್ತಿದ್ದು, ಶೇ. 90 ರಷ್ಟು ಮಂದಿ ಹಳೆ ಖಾಸಗಿ ಬಸ್ ನಿಲ್ದಾಣವನ್ನೇ ಅವಲಂಭಿಸುವಂತಾಗಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಹೇಳುತ್ತಾರೆ.
ಬಹುತೇಕ ಮಂದಿ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿಯೇ ಬಸ್‍ಗಾಗಿ ಕಾಯುವದರಿಂದ ಮಳೆ - ಗಾಳಿ -ಬಿಸಿಲಿಗೆ ಮೈಯ್ಯೊಡ್ಡಿ ನಿಲ್ಲಬೇಕಾಗಿದೆ. ಮಕ್ಕಳು, ವೃದ್ಧರು, ಮಹಿಳೆಯರಿಗಂತೂ ತೀರಾ ಸಮಸ್ಯೆ ಎದುರಿಸುವಂತಾಗಿದೆ. ಈ ಸ್ಥಳದಲ್ಲಿ ನೆರಳು, ಶೌಚಾಲಯದ ವ್ಯವಸ್ಥೆಗಳಾಗಬೇಕಿದೆ ಎಂದು ಅವರು ಹೇಳುತ್ತಾರೆ. ಅಲ್ಲದೆ, ಸಾರಿಗೆ ಸಂಸ್ಥೆ ಬಸ್‍ಗಳೂ ಕೂಡ ಬಂದು ನಿಲ್ಲುವದರಿಂದಲೂ ತೊಂದರೆ ಉಂಟಾಗುತ್ತಿದೆ. ರಾಜಾಸೀಟ್ ಬಳಿ ಪ್ರವಾಸಿಗರ ವಾಹನಗಳ ನಿಲುಗಡೆಯಿಂದ ಸಮಸ್ಯೆ ಎದುರಾಗುತ್ತಿದೆ. ವಾಹನ ದಟ್ಟಣೆ ಏರ್ಪಟ್ಟರೆ ಬಸ್‍ಗಳ ಸಂಚಾರದ ಸಮಯದಲ್ಲಿ ಏರುಪೇರಾಗುತ್ತಿದೆ ಎಂದು ಅಭಿಪ್ರಾಯಿಸಿದರು. ಅಲ್ಲದೆ, ರಾಜಾಸೀಟ್ ಬಳಿಯಿಂದ ಹೊಸ ಬಸ್ ನಿಲ್ದಾಣದವರೆಗೆ ರಸ್ತೆ ಬದಿ ಚರಂಡಿ, ಪಾದಚಾರಿ ಮಾರ್ಗಗಳಿಲ್ಲ, ಇದರಿಂದ ಪಾದಚಾರಿಗಳಿಗೂ ತೊಂದರೆ ಉಂಟಾಗುತ್ತಿದೆ ಎಂದು ರಮೇಶ್ ಹೇಳಿದರು.
ಗೋಣಿಕೊಪ್ಪದಲ್ಲಿಯೂ ನಿಲ್ದಾಣದ ಸಮಸ್ಯೆ ಇದೆ. ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‍ಗಳಿಗೆ ಒಂದೇ ನಿಲ್ದಾಣವಿದ್ದು, ನಿಲುಗಡೆ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ, ನಿಲ್ದಾಣಕ್ಕಾಗಿ ಹೆದ್ದಾರಿ ಕೂಡ ಹಾದು ಹೋಗಿದ್ದು, ಇದೊಂದು ರೀತಿಯ ಸಮಸ್ಯೆಯಾಗಿದೆ ಎಂದು ಹೇಳಿದರು. ಕುಶಾಲನಗರದಲ್ಲಿ ಹೊಸ ನಿಲ್ದಾಣ ಆಗಿದ್ದರೂ ಸಂಪರ್ಕ ರಸ್ತೆ ಸಮರ್ಪಕವಾಗಿಲ್ಲ. ಅಲ್ಲದೆ, ಜಾಗದ ಸಮಸ್ಯೆ ಕೂಡ ಇದೆ; ವ್ಯವಸ್ಥೆಯೂ ಸರಿಯಾಗಿಲ್ಲ. ಆದರೂ ಹೇಗೋ ಸುಧಾರಿಸಿಕೊಂಡು ಬಸ್‍ಗಳನ್ನು ಓಡಿಸುತ್ತಿರುವದಾಗಿ ತಿಳಿಸಿದರು.
ನಿರ್ವಹಣೆ ಕಷ್ಟ : ಬಸ್ ಪ್ರಯಾಣ ದರವನ್ನು ಡೀಸೆಲ್‍ಗೆ ರೂ. 56 ರಷ್ಟಿರುವಾಗ ಪರಿಷ್ಕರಣೆ ಮಾಡಲಾಗಿದೆ. ಆದರೆ ಇದೀಗ ಡೀಸೆಲ್ ದರ ಏರಿಕೆಯಾಗಿದೆ ಇದರೊಂದಿಗೆ ಬಿಡಿಭಾಗಗಳ ದರ, ತೆರಿಗೆ ಕೂಡ ಏರಿಕೆಯಾಗಿದ್ದರೂ ದರ ಪರಿಷ್ಕಕರಣೆ ಮಾಡಿಲ್ಲ; ನಷ್ಟದಲ್ಲಿಯೇ ಓಡಿಸುವಂತಾಗಿದೆ; ಸಂಪೂರ್ಣ ಸಾಲ ಮಾಡಿ ಬಸ್ ಖರೀದಿಸಿದವರಿಗೆ ಬಹಳ ಕಷ್ಟವಾಗುತ್ತಿದೆ ಎಂದು ರಮೇಶ್ ಹೇಳುತ್ತಾರೆ. ಮುಂದೆ ಹೇಗೆ ಎಂಬ ಸಮಸ್ಯೆ ಕಾಡುತ್ತಿದೆ. ಸದ್ಯಕ್ಕೆ ವ್ಯವಸ್ಥೆಗಳನ್ನಾದರೂ ಕಲ್ಪಿಸಿಕೊಟ್ಟರೆ ಹೇಗೋ ಸುಧಾರಿಸಿಕೊಳ್ಳಬಹುದೆಂದು ಅಭಿಪ್ರಾಯಿಸಿದರು.