ಸೋಮವಾರಪೇಟೆ, ಸೆ. 24: ಸಮೀಪದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 50.99 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಎಂ. ಬೋಪಯ್ಯ ಹೇಳಿದರು.

ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿದ್ದು, ರೂ. 50.99 ಲಕ್ಷ ಲಾಭಗಳಿಸುವ ಮೂಲಕ ಸದಸ್ಯರಿಗೆ ಶೇ. 15 ಲಾಭಾಂಶ ನೀಡಲು ತೀರ್ಮಾನಿಸಲಾಗಿದೆ ಎಂದರು.

ಸಂಘದ ವ್ಯಾಪ್ತಿಗೆ 8 ಗ್ರಾಮಗಳು ಒಳಪಡಲಿದ್ದು, ವರದಿ ಸಾಲಿನಲ್ಲಿ ರೂ. 91 ಕೋಟಿ ವಹಿವಾಟು ನಡೆಸಲಾಗಿದೆ. 102 ಸ್ವ ಸಹಾಯ ಗುಂಪುಗಳು ವ್ಯವಹರಿಸುತ್ತಿದ್ದು, ಈ ಸಾಲಿನಲ್ಲಿ 87 ಸ್ವ ಸಹಾಯ ಸಂಘ ಗಳಿಗೆ ರೂ. 3,47,55,000 ಸಾಲ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಲ ಪಡೆದ ಸದಸ್ಯರು ಗಳಿಗೆ ವಿಮಾ ಸೌಲಭ್ಯವನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಪಿ. ರೋಷನ್, ನಿರ್ದೇಶಕರುಗಳಾದ ಹೆಚ್.ಬಿ. ಶಿವಕುಮಾರ್, ಡಿ.ಹೆಚ್. ವಿಶ್ವನಾಥರಾಜೇ ಅರಸ್, ಡಿ.ಎನ್. ಚಂಗಪ್ಪ, ಎಲ್.ಎಂ. ರಾಜೇಶ್, ಡಿ.ಕೆ. ಹೂವಯ್ಯ, ಡಿ.ಸಿ. ಸಬಿತ, ಎಸ್.ಕೆ. ರಾಣಿ, ಬಿ.ಸಿ. ಸುನೀಲ್, ಎಚ್.ಜೆ. ಬಸಪ್ಪ, ಜೆ.ಹೆಚ್. ರಾಜು, ಎಸ್.ಕೆ. ರಘು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಎ. ಡಿಕ್ಕಿರಾಜು, ಮೇಲ್ವಿಚಾರಕ ಎಂ.ಜೆ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. ಪ್ರಥಮವಾಗಿ ಸಂಘದ ಸಾಲ ಮರುಪಾವತಿಸಿದ ರೈತರನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.