ಸೋಮವಾರಪೇಟೆ, ಸೆ. 24: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ .81 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿದರು.

ಪಟ್ಟಣ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಸಂಘದ 66ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ವಾರ್ಷಿಕವಾಗಿ ಸುಮಾರು 256 ಕೋಟಿ ರೂ.ಗಳ ವಹಿವಾಟು ನಡೆಸಿದೆ. ಸಂಘವು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಆ ಹಿನ್ನೆಲೆಯಲ್ಲಿ ಈಗಾಗಲೆ ಸಂಘದ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ರೈತರುಗಳಿಗೆ ಪೂರಕವಾಗುವಂತೆ ಪಶು ಚಿಕಿತ್ಸಾ ಶಿಬಿರ, ಮಣ್ಣು ಪರೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದೆ ಎಂದರು.

ಶತಮಾನೋತ್ಸವದ ಸವಿ ನೆನಪಿಗಾಗಿ ಬಳಗುಂದ ಶಾಖೆಯನ್ನು ಆರಂಭಿಸಲಾಗಿದೆ. ಅಲ್ಲಿ ರೈತರ ಅನುಕೂಲಕ್ಕಾಗಿ ಗೊಬ್ಬರ ಮಿಶ್ರಣದ ಘಟಕವನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುವದು. ಸಂಘದ ಕಾರ್ಯಕ್ರಮಗಳಲ್ಲಿ ಪ್ರತಿಯೋರ್ವ ಸದಸ್ಯರೂ ಭಾಗಿಯಾಗಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳು ಸಂಘದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಬರುವ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್, ನಿರ್ದೇಶಕರುಗಳಾದ ಎಚ್.ಕೆ. ಮಾದಪ್ಪ, ಕೆ.ಎಸ್. ದಾಸಪ್ಪ, ಎಂ.ಎಸ್. ಲಕ್ಷ್ಮೀಕಾಂತ್, ಬಿ.ಎಂ. ಸುರೇಶ್, ಜಿ.ಬಿ. ಸೋಮಯ್ಯ, ಸುಮಾ ಸುದೀಪ್, ನಳಿನಿ ಗಣೇಶ್, ಎಸ್.ಎನ್. ಸೋಮಶೇಖರ್, ರೂಪ ಸತೀಶ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ. ರವೀಂದ್ರ, ಪ್ರಬಾರ ಲೆಕ್ಕಿಗ ಪಿ. ಅನಿಲ್‍ಕುಮಾರ್, ಸಿಬ್ಬಂದಿ ಎಸ್.ಕೆ. ಮಹೇಶ್ ಉಪಸ್ಥಿತರಿದ್ದರು.