ವೀರಾಜಪೇಟೆ, ಸೆ. 24: ಕಳೆದ ಮೂರು ತಿಂಗಳ ಹಿಂದೆ ವೀರಾಜಪೇಟೆ ವಿಭಾಗಕ್ಕೆ ಬಿದ್ದ ಭಾರೀ ಮಳೆಗೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಿ ಕಟ್ಟಡಗಳು, ರಸ್ತೆ ಸೇತುವೆ ಚರಂಡಿ ದುರಸ್ತಿ, ಮನೆಗಳ ಜಖಂ ಸೇರಿದಂತೆ ಪಟ್ಟಣ ಪಂಚಾಯಿತಿಗೆ ಒಟ್ಟು ರೂ ಒಂಭತ್ತು ಕೋಟಿ ನಲ್ವತ್ತಾರು ಲಕ್ಷ ನಷ್ಟ ಸಂಭವಿಸಿರುವದಾಗಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20 ಕಿ.ಮೀಟರ್ ರಸ್ತೆ ದುರಸ್ತಿಗೊಳಗಾಗಿದೆ. ಸೇತುವೆ, ಚರಂಡಿ, ರಸ್ತೆಯಿಂದ ಒಟ್ಟು 9 ಕೋಟಿ ನಷ್ಟ ಉಂಟಾಗಿದೆ. ಏಳು ಸರಕಾರಿ ಕಟ್ಟಡಗಳು ಜಖಂಗೊಂಡಿದ್ದರಿಂದ ರೂ. 14 ಲಕ್ಷ ನಷ್ಟ ಸಂಭವಿಸಿದೆ. ವೀರಾಜಪೇಟೆ ಪಟ್ಟಣಕ್ಕೆ ನಲ್ಲಿ ನೀರು ಪೊರೈಸುವ ಬೇತರಿ ಗ್ರಾಮದ ಮೂಲ ಸ್ಥಾವರ ನೀರಿನಿಂದ ಮುಳುಗಡೆ ಗೊಂಡಿದ್ದು ಸೇರಿ ವೀರಾಜಪೇಟೆ ಪಟ್ಟಣದ ಸುಮಾರು ಹನ್ನೆರಡು ಕಡೆಗಳಲ್ಲಿ ಶಿವಕೇರಿ, ಅರಸುನಗರ, ನೆಹರೂನಗರದ ವಿವಿಧೆಡೆಗಳಲ್ಲಿ ನೀರು ಶೇಖರಣಾ ಕೇಂದ್ರದ ಘಟಕಗಳು ಹಾನಿಗೊಳಗಾಗಿದ್ದರಿಂದ ರೂ. 18 ಲಕ್ಷ ನಷ್ಟ ಉಂಟಾಗಿದೆ.
ವೀರಾಜಪೇಟೆಯ ನೆಹರೂನಗರ, ಮಲೆತಿರಿಕೆಬೆಟ್ಟ, ಸುಂಕದಕಟ್ಟೆ, ಅರಸುನಗರ, ವಿವಿಧೆಡೆಗಳಲ್ಲಿ ಮಳೆಯಿಂದ
(ಮೊದಲ ಪುಟದಿಂದ) ಒಟ್ಟು 141 ಮನೆಗಳು ಜಖಂಗೊಂಡಿದ್ದು ರೂ ಒಂದು ಕೋಟಿಗೂ ಅಧಿಕ ನಷ್ಟ ಉಂಟಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಈ ಪೈಕಿ 92 ಮನೆಗಳಿಗೆ ಪರಿಹಾರಕ್ಕಾಗಿ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಉಳಿದ 49 ಮನೆಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಪರಿಹಾರಕ್ಕೆ ಶಿಫಾರಸು ಮಾಡಿ ಸರಕಾರಕ್ಕೆ ಕಳುಹಿಸಿ ಕೊಡಲಾಗುವದು ಎಂದು ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದರು.