ಮಡಿಕೇರಿ, ಸೆ. 24: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ಕ್ಲಬ್ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಗ್ರಾಮೋತ್ಥಾನ ಭಾರತ ಪ್ರಕಾಶನ ಹೊರತಂದಿರುವ ಪತ್ರಕರ್ತ ಚಿ.ನಾ. ಸೋಮೇಶ್ ಬರೆದಿರುವ ‘ಆಂಜಮುತ್ತ್’ ಕೊಡವ ಭಾಷೆ ಕೃತಿ ಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷ ಕೆ.ಎಸ್. ದೇವಯ್ಯ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು, ಭಾಷೆ ಮೇಲೆ ಹಿಡಿತ ಸಾಧಿಸಿರುವ ಸೋಮೇಶ್ ಕೃತಿ ಹೊರತಂದಿರುವದು ಸ್ವಾಗತಾರ್ಹ. ಇಂದು ಕೊಡಗಿನ ಬಗ್ಗೆ ಬರೆಯುವವರು ಅವರವರಿಗೆ ತೋಚಿದಂತೆ ಬರೆಯುತ್ತಿದ್ದಾರೆ. ಇದರಿಂದ (ಮೊದಲ ಪುಟದಿಂದ) ಕೊಡಗಿನ ಪರಂಪರೆಗೆ ಒಂದೊಂದು ಅರ್ಥ ನೀಡಿದಂತಾಗಿದೆ ಎಂದ ಅವರು ಕೊಡಗಿನವರು ಒಗ್ಗೂಡಿ ಬದುಕಿದಾಗ ಮಾತ್ರ ಕೊಡಗನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಅಭಿಮತ ವ್ಯಕ್ತ ಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಕ್ತಿ ಪತ್ರಿಕೆ ಸಂಪಾದಕರಾದ ಜಿ. ಚಿದ್ವಿಲಾಸ್ ಮಾತನಾಡಿ, ಹಿಂದಿನ ಕಾಲದಲ್ಲಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿ ದ್ದವರು ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದರು. ಇಂದು ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವ ಹಿಸುತ್ತಿರುವವರು ಕೂಡ ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಾಹಿತ್ಯ ಹಾಗೂ ಕನ್ನಡ ಭಾಷೆಯ ಬೆಳವಣಿಗೆಗೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧೆ ಮತ್ತು ಆಸಕ್ತಿಯ ಜೊತೆಗೆ ಅತಿ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ವಿವಿಧ ಕ್ಷೇತ್ರದಲ್ಲಿ ಶಕ್ತಿಯಾಗಿ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ‘ಸ್ವಾರ್ಥಕ್ಕೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತಿದೆ. ಇದು ನೋವಿನ ವಿಚಾರ. ಬದುಕಿನ ದಾರಿಗಳು ಹಲವು. ಆದರೆ, ಬದುಕಿನ ದಾರಿಯಲ್ಲಿ ಸಾಧನೆಯ ನೆನಪುಗಳನ್ನು ಉಳಿಸಿ ಹೋಗಬೇಕು’ ಎಂದು ಅಭಿಪ್ರಾಯಿಸಿದರು.
‘ಯಾವ ಸಮುದಾಯವನ್ನು ನಿಕೃಷ್ಟ ಭಾವನೆಯಿಂದ ನೋಡ ಬಾರದು. ಬೇರೆ ಬೇರೆ ಸಮುದಾಯ ಆಚರಣೆ, ಆಹಾರ ಪದ್ಧತಿ, ಸಮಾರಂಭದ ಬಗ್ಗೆ ಸಹಜ ಕುತೂಹಲ ಇರಬೇಕು. ನನ್ನದೇ ಶ್ರೇಷ್ಠ; ಮತ್ತೊಬ್ಬರದ್ದು ಕಡೆ ಎನ್ನುವ ಭಾವನೆ ಇರಬಾರದೆಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ‘ಆಂಜ ಮುತ್ತ್’ ಕೃತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೃತಿ ರಚನೆಕಾರ ಚಿ.ನಾ. ಸೋಮೇಶ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆದಿತ್ಯ ಉಪಸ್ಥಿತರಿದ್ದರು. ‘ಶಕ್ತಿ’ ಉಪ ಸಂಪಾದಕ ಉಜ್ವಲ್ ರಂಜಿತ್ ಪ್ರಾರ್ಥಿಸಿದರೆ, ಪತ್ರಕರ್ತರ ಸಂಘದ ಕಾರ್ಯದರ್ಶಿ ಆನಂದ್ ಕೊಡಗು ನಿರೂಪಿಸಿದರು. ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರ್. ಸುಬ್ರಮಣಿ ಸ್ವಾಗತಿಸಿದರೆ, ಪ್ರೆಸ್ ಕ್ಲಬ್ ಉಪಾಧ್ಯಕ್ಷ ವಿಘ್ನೇಶ್ ಭೂತನಕಾಡು ವಂದಿಸಿದರು.