ಒಡೆಯನಪುರ, ಸೆ. 25: ಒಡೆಯನಪುರ ಹಾಲು ಉತ್ಪಾದಕರ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಸಿ.ರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು. ಹಾಸನ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಿ.ವಿ.ವೀಣಾ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿ-ಹೈನುಗಾರಿಕೆ ಒಂದು ಲಾಭದಾಯಕ ಕಾಯಕವಾಗಿದ್ದು ಸಮಯ ಪಾಲನೆ ಮತ್ತು ನಿರಂತರ ಪಶುಪಾಲನೆ ಕ್ರಮ ಮುಖ್ಯವಾಗಿರುತ್ತದೆ ಎಂದರು.
ಹಸುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಔಷಧಿಗಳನ್ನು ನೀಡಿ ಆರೋಗ್ಯವಂತ ಹೈನುಗಾರಿಕೆ ಕ್ರಮದಿಂದ ಹೆಚ್ಚಿನ ಲಾಭಗಳಿಸುವಂತೆ ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಒಡೆಯನಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್-ಸಂಘದ ವ್ಯಾಪ್ತಿ 5 ಗ್ರಾಮಗಳನ್ನು ಒಳಗೊಂಡಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಸಂಘವು ಪ್ರಸ್ತಕ್ತ ಸಾಲಿನಲ್ಲಿ ನಿವ್ವಳ ಲಾಭದತ್ತ ಮುನ್ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಸಂಘದ ಸದಸ್ಯರು ಸಮಯಕ್ಕೆ ಸರಿಯಾಗಿ ಗುಣಮಟ್ಟದ ಹಾಲನ್ನು ನೀಡುವ ಮೂಲಕ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಹಕರಿಸುವಂತೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷೆ ಪೂವಮ್ಮ, ನಿರ್ದೇಶಕರುಗಳಾದ ಪಿ.ಜಿ. ಪರಮೇಶ್, ಎಂ.ಜಿ. ಅಂಥೋಣಿ, ಬಿ.ಆರ್. ಮಂಜುನಾಥ್, ಶಾರದ ಸಂಘದ ಕಾರ್ಯದರ್ಶಿ ವಿ.ಆರ್. ಸಿಂಚನ ಉಪಸ್ಥಿತರಿದ್ದರು.
- ವಿ.ಸಿ. ಸುರೇಶ್ ಒಡೆಯನಪುರ