ಕುಶಾಲನಗರ, ಸೆ. 25: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕುಶಾಲನಗರ ಪಟ್ಟಣ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ಪೌಷ್ಠಿಕ ಆಹಾರ ಸಪ್ತಾಹ ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಸ್ಥಳೀಯ ಎಚ್‍ಆರ್‍ಪಿ ಕಾಲನಿಯ ರಾಮಮಂದಿರದಲ್ಲಿ ನಡೆಯಿತು.

ಕುಶಾಲನಗರ ಪ.ಪಂ. ಸದಸ್ಯೆ ಜಯಲಕ್ಷ್ಮಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ನಿರ್ಮಲ ಮಾತನಾಡಿ, ಇಲಾಖೆ ಮೂಲಕ ಗರ್ಭಿಣಿಯರಿಗೆ ಹಲವು ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಸ್ಥಳೀಯ ಅಂಗನವಾಡಿ ಶಿಕ್ಷಕಿ ಸುಚಿತ್ರ, ಸಲಹೆಗಾರರಾದ ಶಾಂತಮ್ಮ, ಪಪಂ ಅಧಿಕಾರಿ ಸತೀಶ್, ಆರೋಗ್ಯ ನಿರೀಕ್ಷಕರುಗಳಾದ ವಿಜಯೇಂದ್ರ, ಸುಶೀಲ, ಗೌರಮ್ಮ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳಿಗೆ ಐಡಿ ಕಾರ್ಡ್ ವಿತರಣೆ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.