ಪೊನ್ನಂಪೇಟೆ, ಸೆ. 25: ಆಧ್ಯಾತ್ಮಿಕತೆ ಮನುಷ್ಯನ ಬದುಕು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದೇ ರೀತಿ ಇಸ್ಲಾಂ ಧರ್ಮದಲ್ಲಿ ಪರಿಶುದ್ಧ ಹಜ್ ಮತ್ತು ಉಮ್ರಾ ನಿರ್ವಹಿಸುವದರಿಂದ ಜೀವನ ಶೈಲಿ ಬದಲಾಗಿ ವ್ಯಕ್ತಿಯ ಸಂಸ್ಕಾರ ಉನ್ನತೀಕರಣಗೊಳ್ಳುತ್ತದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅಭಿಪ್ರಾಯಪಟ್ಟಿದ್ದಾರೆ.
ವೀರಾಜಪೇಟೆಯ ಡಿ.ಹೆಚ್.ಎಸ್. ಎನ್‍ಕ್ಲೇವ್ ಸಭಾಂಗಣದಲ್ಲಿ ಸ್ಥಳೀಯ ಎನ್.ಸಿ.ಟಿ. ಸಂಸ್ಥೆಯ ವತಿಯಿಂದ ನಡೆದ ಉಮ್ರಾ ಯಾತ್ರಾರ್ಥಿಗಳ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಮನುಷ್ಯನ ವಿಕಸನದಲ್ಲಿ ಧಾರ್ಮಿಕ ನಂಬಿಕೆ ಬಹುಮುಖ್ಯವಾದದ್ದು. ಮಾನವೀಯತೆ ಮತ್ತು ಮನುಷ್ಯತ್ವದ ಮೂಲ ತಳಹದಿಯೇ ನಂಬಿಕೆ. ನಂಬಿಕೆ ಎಂದೂ ಮಾರಾಟದ ವಸ್ತುವಲ್ಲ. ಆದರೆ ಅದು ಫ್ಯಾಷನ್ ಆಗಿ ಪರಿವರ್ತನೆಯಾಗಬಾರದು. ಅದೇ ರೀತಿ ಹಜ್ ಮತ್ತು ಉಮ್ರಾ ಎಂಬ ಧಾರ್ಮಿಕ ಯಾತ್ರೆ ತೋರ್ಪಡಿಸುವಿಕೆ ಮತ್ತು ಸ್ಪರ್ಧೆಯ ಕರ್ಮವಾಗಬಾರದು ಎಂದು ಸೂಫಿ ಹಾಜಿ ಕಿವಿಮಾತು ಹೇಳಿದರು. ಇಂದು ಉಮ್ರಾ ಯಾತ್ರೆಯ ಹೆಸರಿನಲ್ಲಿ ಸಾಕಷ್ಟು ಏಜೆನ್ಸಿಗಳು ಜನರಿಗೆ ಮೋಸ ಮಾಡುತ್ತಿವೆ. ಕೆಲ ಬೇನಾಮಿ ಏಜೆನ್ಸಿ ಹೆಸರಿನಲ್ಲಿ ಹಣದಾಸೆಯ ವಂಚಕರು ಮುಗ್ಧರನ್ನು ವಂಚಿಸುತ್ತಿರುವ ಪ್ರಕರಣ ದಿನೇ ದಿನೇ ಬೆಳಕಿಗೆ ಬರುತ್ತಿದೆ. ಕಷ್ಟಪಟ್ಟು ಕೂಲಿ ಮಾಡಿ ಕೂಡಿಟ್ಟ ತಮ್ಮ ಬೆವರಿನ ಹಣದಲ್ಲಿ ಉಮ್ರಾ ಯಾತ್ರೆಯ ಕನಸನ್ನು ಹೊತ್ತ ಹಲವಾರು ಮುಗ್ಧರು ಈ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಕೊಡಗಿ ನಲ್ಲಿಯೂ ಸಾಕಷ್ಟು ವಿಶ್ವಾಸಿಗಳು ವಂಚನೆಗೊಳಗಾಗಿ ಪರಿತಪಿಸಿ ದವರಿದ್ದಾರೆ ಎಂದರು. ಕಾರ್ಯಕ್ರಮ ದಲ್ಲಿ ಉಮ್ರಾ ಯಾತ್ರೆಗಾಗಿ ಅಕ್ಟೋಬರ್ 1 ರಂದು ಕೊಡಗಿನಿಂದ ಹೊರಡುವ ಮೊದಲ ಗುಂಪಿನ ಯಾತ್ರಾರ್ಥಿಗಳಿಗೆ ಸಾಂಪ್ರದಾಯಿಕ ಉಮ್ರಾ ಕಿಟ್ ನೀಡಿ ಬೀಳ್ಕೊಡಲಾಯಿತು. ಕಾರ್ಯಾಗಾರ ದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್‍ನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಎ. ಅಬ್ಬಾಸ್, ಮಾಜಿ ಅಧ್ಯಕ್ಷ ಎಂ.ಎ. ಉಮ್ಮರ್ ಮೊದಲಾದವರು ಮಾತನಾಡಿದರು. ಎನ್.ಸಿ.ಟಿ. ಸಂಸ್ಥೆಯ ಮಾಲೀಕ ಅಕ್ಕಳತಂಡ ಎಸ್. ಮೊಯಿದು ಅಧ್ಯಕ್ಷತೆ ವಹಿಸಿದ್ದರು. ಉಮ್ರಾ ಯಾತ್ರೆಯ ಅಮೀರರಾದ ಗುಂಡಿಕೆರೆಯ ಆಲಿ ಉಸ್ತಾದ್ ತರಬೇತಿ ಕಾರ್ಯಾಗಾರ ವನ್ನು ನಡೆಸಿದರು. ಅಂಬಟಿಯ ಯೂಸುಫ್, ಎನ್.ಸಿ.ಟಿ. ಸಂಸ್ಥೆಯ ಮುಖ್ಯ ಕೇಂದ್ರದ ವ್ಯವಸ್ಥಾಪಕ ಆರೀಫ್, ವೀರಾಜಪೇಟೆ ಕೇಂದ್ರದ ವ್ಯವಸ್ಥಾಪಕ ಕೆ.ಎ. ಹನೀಫ್ ಮೊದಲಾದವರು ಹಾಜರಿದ್ದರು. 45 ಉಮ್ರಾ ಯಾತ್ರಾರ್ಥಿಗಳು ಪಾಲ್ಗೊಂಡಿದ್ದರು.